ಸಮಗ್ರ ಸುದ್ದಿ

ನಾಳೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮತ ಎಣಿಕೆ; ಚುನಾವಣಾ ಆಯೋಗದಿಂದ ಅಂತಿಮ ಸಿದ್ಧತೆ

Share

ಬೆಂಗಳೂರು: ಪಂಚ ರಾಜ್ಯಗಳ ವಿಧಾನಸಭೆ ಹಾಗೂ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಮತಎಣಿಕೆಗೆ ಚುನಾವಣಾ ಆಯೋಗ ಅಂತಿಮ ಸಿದ್ಧತೆಗಳನ್ನು ಕೈಗೊಂಡಿದೆ.

ಇದೇ ಮೊದಲ ಬಾರಿಗೆ ಮತ ಎಣಿಕೆ ಕೇಂದ್ರಗಳಲ್ಲಿರುವ ವಿವಿಧ ಪಕ್ಷಗಳ ಏಜೆಂಟರುಗಳಿಗೆ ಕ್ಯೂ ಆರ್ ಕೋಡ್ ಆಧಾರಿತ ಪೋಟೋ ಸಹಿತ ಗುರುತಿನ ಪತ್ರವನ್ನು ವಿತರಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ ಭದ್ರತಾ ಕೊಠಡಿಗಳನ್ನು ತೆರೆಯಲಾಗುತ್ತದೆ. ಬಳಿಕ ಅಂಚೆ ಮತಪತ್ರಗಳ ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರಗಳ ಸುತ್ತ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಗಳ ಬಳಿ ಕೇಂದ್ರ ಸಶಸ್ತ್ರ ಪೊಲೀಸ್ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರ ಮೂರು ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಸಿಬ್ಬಂದಿಗೆ ಇವಿಎಂ ನಿರ್ವಹಣೆ, ಅಂಚೆ ಮತಪತ್ರಗಳ ಪರಿಶೀಲನೆ ಬಗ್ಗೆ ಸೇರಿದಂತೆ ಹಲವಾರು ಬಾರಿ ತರಬೇತಿಯನ್ನು ನೀಡಲಾಗಿದೆ. ಸೂಕ್ಷ್ಮ ಮತ ಎಣಿಕೆ ಕೇಂದ್ರಗಳಿರುವ ಪಶ್ಚಿಮ ಬಂಗಾಳದ ಹಲವು ಕಡೆಗಳಲ್ಲಿ ವಿಶೇಷ ಚುನಾವಣಾ ವೀಕ್ಷಕರನ್ನು ಸಹ ನೇಮಕ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9, ತಮಿಳುನಾಡು , ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಏಪ್ರಿಲ್ 23, 29ರಂದು ಚುನಾವಣೆ ನಡೆದಿತ್ತು.
ಏಪ್ರಿಲ್ 9ರಂದು ನಡೆದ ಕರ್ನಾಟಕದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಸಹ ನಾಳೆ ನಡೆಯಲಿದೆ.


Share

You cannot copy content of this page