ಸಮಗ್ರ ಸುದ್ದಿ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಎಣಿಕೆ ಕಾರ್ಯ ಮುಕ್ತಾಯ| ಮತ ವ್ಯತ್ಯಾಸದ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ

Share

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ನಿನ್ನೆ ಅಂಚೆ ಮತಪತ್ರಗಳ ಮರು ಎಣಿಕೆ ಕೈಗೊಳ್ಳಲಾಗಿತ್ತು.

ಇಡೀ ರಾತ್ರಿ ಮತಪತ್ರಗಳ ಮರು ಎಣಿಕೆ ಮಾಡಲಾಗಿದ್ದು, ಇದೀಗ ಮರು ಎಣಿಕೆಯ ಬಳಿಕ ಡಿ.ಎನ್. ಜೀವರಾಜ್ ಅವರಿಗೆ 690 ಮತಗಳು ಹಾಗೂ ಟಿ.ಡಿ. ರಾಜೇಗೌಡ ಅವರಿಗೆ 314 ಮತಗಳು ಬಂದಿವೆ ಎಂದು ತಿಳಿದುಬಂದಿದೆ.

ಮತ ಎಣಿಕೆ ಪ್ರಕ್ರಿಯೆ ಬಳಿಕ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವ ಶೆಟ್ಟಿ, 2023ರ ಚುನಾವಣೆಯಲ್ಲಿ ಒಂದು ಸಾವಿರದ 822 ಅಂಚೆ ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಬಿಜೆಪಿ ಆಭ್ಯರ್ಥಿ ಜೀವರಾಜ್ ಗೆ 692 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು.
ಆದರೆ ಇದೀಗ ನಡೆದ ಪರಿಶೀಲನೆ ಮತ್ತು ಮರು ಏಣಿಕೆಯ ಬಳಿಕ ಜೀವರಾಜ್ ಅವರಿಗೆ 690 ಮತಗಳು ಹಾಗೂ ರಾಜೇಗೌಡ ಅವರಿಗೆ 314 ಮತಗಳು ಬಂದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿರುವುದು ತಿಳಿದುಬಂದಿದೆ.

ನ್ಯಾಯಾಲಯದ ನಿರ್ದೇಶನದಂತೆ ಪರಿಶೀಲನೆ , ಮರು ಎಣಿಕೆ ಪ್ರಕ್ರಿಯೆ ನಡೆಸಿ, ಮತಪತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿ ಬೀಗಮುದ್ರೆ ಹಾಕಲಾಗಿದೆ. ಎಣಿಕೆ ನಂತರ ಕಂಡು ಬಂದಿರುವ ಮತ ವ್ಯತ್ಯಾಸದ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಆದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಆವರ ಮೂವರು ಬೆಂಬಲಿಗರು ಮತಪತ್ರಗಳನ್ನು ತಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.


Share

You cannot copy content of this page