ಬೆಂಗಳೂರು:ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ ಸಮರ್ಥ, ಪ್ರಾಮಾಣಿಕ ಆಡಳಿತಗಾರಾಗಿದ್ದು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ನಡೆದುಕೊಂಡವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ. ರೆಡ್ಡಿ ಯವರ ಜನ್ಮ ದಿನದ ಅಂಗವಾಗಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆ.ಸಿ.ರೆಡ್ಡಿಯವರು ಸ್ವಾತಂತ್ರ್ಯದ ನಂತರ ಮೊದಲ ಮುಖ್ಯಮಂತ್ರಿಯಾದವರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು.ಕೋಲಾರ ಮೂಲದವರಾದ ಅವರು ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು. ಕಾಂಗ್ರೆಸ್ ಪಕ್ಷ ಸದೃಢವಾಗಿರಲು ಅವರು ಕಾರಣಕರ್ತರು ಎಂದರು.
ಕೆ.ಸಿ.ರೆಡ್ಡಿಯವರ ಆಡಳಿತದ ಹೆಜ್ಜೆಗಳು ನಮಗೆ ದಾರಿದೀಪ
ಐಟಿಐ, ಎಚ್.ಎಂ.ಟಿ, ಇಸ್ರೋ ಮುಂತಾದ ಸಂಸ್ಥೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿದ್ದರೆ ಅದಕ್ಕೆ ಅವರು ಮೂಲ ಕಾರಣ ಎಂದರು. ಕೆ.ಸಿ.ರೆಡ್ಡಿಯವರ ಆಡಳಿತದ ಹೆಜ್ಜೆಗಳು ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ಹೇಳಿದರು.
ಎರಡೂ ಕ್ಷೇತ್ರಗಳಲ್ಲಿ ಗೆಲುವು: ಸಿಎಂ ವಿಶ್ವಾಸ*
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ದಾವಣಗೆರೆಯಲ್ಲಿ ನಾನಾ ಕಾರಣದಿಂದ ಗೆಲುವಿನ ಅಂತರ ಕಡಿಮೆಯಾಗಬಹುದು ಆದರೆ ಗೆಲ್ಲುತ್ತೇವೆ ಎಂದರು.
ಕೇರಳದಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನ ಗಳಿಸಿದ್ದೇವೆ*
ಪಂಚ ರಾಜ್ಯ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅಸ್ಸಾಂನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದ್ದು, ಅದನ್ನು ಒಪ್ಪಿಕೊಳ್ಳುತ್ತೇವೆ. ಕೇರಳದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದೇವೆ. ಸುಮಾರು 76 ರಿಂದ 80 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆವು, ಆದರೆ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು ಎಂದು ಭಾವಿಸಿದ್ದೇನೆ ಎಂದರು.
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿರುವ ಬಗ್ಗೆ ಮಾತನಾಡಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
