ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀಳುವ ಹಂತದಲ್ಲಿರುವ ಕಾಂಪೌಂಡ್ ಗೋಡೆಗಳು ಹಾಗೂ ಅಪಾಯಕಾರಿಯಾದ ಕಟ್ಟಡಗಳನ್ನು ತ್ವರಿತವಾಗಿ ಗುರುತಿಸಿ ತೆರವುಗೊಳಿಸುವ ಕಾರ್ಯ ಕೈಗೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಗರಾದ್ಯಂತ ಏಪ್ರಿಲ್ 20ರಂದು ಸಂಜೆ ಸುರಿದ ಆಲಿಕಲ್ಲು, ಗಾಳಿ ಸಹಿತ ಭಾರೀ ಮಳೆಯಿಂದ ಅನೇಕ ಕಡೆ ಮರಗಳು ಹಾಗೂ ಕೊಂಬೆಗಳು ಮುರಿದು ರಸ್ತೆಗಳಿಗೆ ಬಿದ್ದಿರುವುದನ್ನು ಗಮನಿಸಿದ್ದಾರೆ.
ಮುಂದುವರಿದು, ಮಳೆಯ ತೀವ್ರತೆಯಿಂದ ಬೋರಿಂಗ್ ಆಸ್ಪತ್ರೆಯ ಗೋಡೆ ಕುಸಿತದಿಂದ 7 ಮಂದಿ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಇದರಿಂದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿಯಾಗಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಜೊತೆಗೆ, ಅನೇಕ ಕಡೆ ಮರಗಳು ಹಾಗೂ ಮರದ ಕೊಂಬೆಗಳು ಮುರಿದು ಬೀಳುವ ಸಂಭವವಿದೆ.
ಆದ್ದರಿಂದ, ಬೀಳುವ ಹಂತದಲ್ಲಿರುವ ಮರಗಳು, ಮರದ ರೆಂಬೆ-ಕೊಂಬೆಗಳು, ಅಪಾಯಕಾರಿಯಾದ ಗೋಡೆಗಳು ಹಾಗೂ ಕಟ್ಟಡಗಳನ್ನು ತಕ್ಷಣವೇ ಗುರುತಿಸಿ, ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು, ಸೂಚಿಸಿದ್ದಾರೆ.
ತಂಡಗಳನ್ನು ರಚಿಸಿ ಮುಂಜಾಗ್ರತಾ ಕ್ರಮವಹಿಸಲು ಸೂಚನೆ
ಅದರಂತೆ, ಎಲ್ಲಾ 5 ನಗರಪಾಲಿಕೆಗಳ ಆಯುಕ್ತರುಗಳು ಹಾಗೂ ಅಪರ ಆಯುಕ್ತರುಗಳು ಮೇಲ್ಕಂಡ ಅಂಶಗಳ ಕುರಿತು ಖುದ್ದಾಗಿ ಗಮನಹರಿಸಿ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ನಗರಪಾಲಿಕೆ ಅಧಿಕಾರಿಗಳು/ಸಿಬ್ಬಂದಿಯನ್ನು ಒಳಗೊಂಡಂತೆ ವಿಶೇಷ ತಂಡಗಳನ್ನು ರಚಿಸಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯ ಸಾಧ್ಯತೆಯನ್ನು ಮನಗಂಡು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಗೋಡೆಗಳ ತೆರವು:
ಕೇಂದ್ರ ನಗರ ಪಾಲಿಕೆಯ ಬಿನ್ನಿಮಿಲ್ ರಸ್ತೆಯಲ್ಲಿ ಹಳೆಯ ಗೋಡೆಯೊಂದು ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿತ್ತು. ಇತ್ತೀಚಿನ ಮಳೆಯ ಸಂದರ್ಭದಲ್ಲಿ ಸುಮಾರು 60 ಮೀಟರ್ ಉದ್ದದ 10 ಅಡಿ ಎತ್ತರದ ಗೋಡೆ ಕುಸಿದ ಹಿನ್ನೆಲೆ, ಇಂದು 25 ಅಡಿ ಎತ್ತರದ 300 ಮೀಟರ್ ಗೋಡೆಯನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ. ಜೊತೆಗೆ, 10 ಅಡಿ ಎತ್ತರದ 100 ಮೀಟರ್ ಗೋಡೆಯ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಪಶ್ಚಿಮ ನಗರ ಪಾಲಿಕೆಯ ಮೈಸೂರು ಲ್ಯಾಂಪ್ಸ್ ಆವರಣದ 8ನೇ ಮುಖ್ಯರಸ್ತೆ, ಮಲ್ಲೇಶ್ವರದಲ್ಲಿರುವ 240 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಸುರಕ್ಷತಾ ಕ್ರಮಗಳು, ಮಾನವಶಕ್ತಿ ಹಾಗೂ ಯಂತ್ರೋಪಕರಣಗಳ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ.
