ಸಮಗ್ರ ಸುದ್ದಿ

ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲು208.67 ಕೋಟಿ ರೂ. ಬಿಡುಗಡೆ: ಸಚಿವ ಪ್ರಿಯಾಂಕ್ ಖರ್ಗೆ

Share

ಬೆಂಗಳೂರು: ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವವನ್ನು ತಗ್ಗಿಸಲು ಸರ್ಕಾರವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದು, ಮಾರ್ಚ್ 2026 ರಿಂದ ಇಂದಿನವರೆಗೆ ಒಟ್ಟು 208.67 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಅವರು, ತುರ್ತು ಕಾಮಗಾರಿಗಳಿಗಾಗಿ ಇಂದು ಪುನಃ ₹72 ಕೋಟಿಗಳ ಹೆಚ್ಚುವರಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಅನುದಾನವನ್ನು ಪ್ರಸಕ್ತ ಸಾಲಿನ ಹೊಸ ಕಾಮಗಾರಿಗಳ ಜೊತೆಗೆ, ಈ ಹಿಂದೆ ಟಾಸ್ಕ್ ಫೋರ್ಸ್ ಸಮಿತಿಯಿಂದ ಅನುಮೋದನೆ ಪಡೆದು ಪೂರ್ಣಗೊಂಡಿದ್ದ ಕಾಮಗಾರಿಗಳ ಬಾಕಿ ಪಾವತಿಗಾಗಿ ವಿನಿಯೋಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತುರ್ತು ಕ್ರಮಗಳಿಗೆ ಸೂಚನೆ:

ಬೇಸಿಗೆಯ ತೀವ್ರತೆಯಿಂದ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳ ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತಗಳು ಲಭ್ಯವಿರುವ ಕೊಳವೆಬಾವಿಗಳನ್ನು ಫ್ಲಶಿಂಗ್ ಮಾಡಲು ಮತ್ತು ಆಳಗೊಳಿಸಲು ಸಚಿವರು ನಿರ್ದೇಶನ ನೀಡಿದ್ದಾರೆ. ನೀರಿನ ಮೂಲಗಳಿಲ್ಲದ ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಭೂವಿಜ್ಞಾನಿಗಳ ವರದಿ ಆಧರಿಸಿ ಹೊಸ ಕೊಳವೆಬಾವಿ ಕೊರೆಯಲು ಮತ್ತು ಪಂಪಿಂಗ್ ಯಂತ್ರಗಳನ್ನು ಅಳವಡಿಸಲು ಸೂಚಿಸಲಾಗಿದೆ.

ಪರಿಸ್ಥಿತಿ ಅವಲೋಕನ:

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆಯುಂಟಾಗದಂತೆ ಸಮರ್ಪವಾಗಿ ನೀರು ಸರಬರಾಜು ಮಾಡಲು ನಿರಂತರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುತ್ತಿದ್ದಾರೆ, ಸರ್ಕಾರದ ಮಟ್ಟದಲ್ಲಿ ನಿಯಮಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದೂ ಸಚಿವರು ಹೇಳಿದ್ದಾರೆ.

ಪಾರದರ್ಶಕತೆಗೆ ಆದ್ಯತೆ:

“ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳುವಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (KTPP Act) ಮತ್ತು ಆರ್ಥಿಕ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಮಗಾರಿಗಳ ಭೌತಿಕ ಪ್ರಗತಿಯನ್ನು ಆಧರಿಸಿ ಮಾತ್ರ ಬಿಲ್‌ಗಳನ್ನು ಪಾವತಿಸಲು ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.


ಈ ಬೃಹತ್ ಮೊತ್ತದ ಬಿಡುಗಡೆಯಿಂದಾಗಿ ರಾಜ್ಯದ 31 ಜಿಲ್ಲೆಗಳ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಕ್ಷಣದ ಪರಿಹಾರ ದೊರೆಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share

You cannot copy content of this page