ಸಮಗ್ರ ಸುದ್ದಿ

ಜಾಗತಿಕ ಕ್ರಿಯೇಟಿವ್ ಟೆಕ್ನಾಲಜಿ ಕ್ಷೇತ್ರದಲ್ಲಿ ಕರ್ನಾಟಕದ ಹೊಸ ಹೆಜ್ಜೆ: ಫಿನ್‌ಲ್ಯಾಂಡ್‌ನ ಟ್ಯಾಂಪೆರೆ ಜೊತೆ ಸಹಕಾರಕ್ಕೆ ಒಪ್ಪಂದ

Share

ಬೆಂಗಳೂರು:ಕರ್ನಾಟಕದ ತಂತ್ರಜ್ಞಾನ ಮತ್ತು ನಾವೀನ್ಯತೆ ವಲಯವನ್ನು ಸಾಂಪ್ರದಾಯಿಕ ಐಟಿ ಕ್ಷೇತ್ರಗಳಾಚೆಗೆ ವಿಸ್ತರಿಸಿ, ಜಾಗತಿಕ ಕ್ರಿಯೇಟಿವ್ ಟೆಕ್ನಾಲಜಿ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಅನಿಮೇಷನ್, ದೃಶ್ಯ ಪರಿಣಾಮಗಳು (ವಿಎಫ್‌ಎಕ್ಸ್), ಡಿಜಿಟಲ್ ಸಿನಿಮಾ, ಗೇಮಿಂಗ್, ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸೇರಿದಂತೆ ಸೃಜನಶೀಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಫಿನ್‌ಲ್ಯಾಂಡ್‌ನ ಟ್ಯಾಂಪೆರೆ ಪ್ರದೇಶದ ನಡುವೆ ಸಹಕಾರ ವೃದ್ಧಿಸಲು ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಹಾಗೂ ಫಿನ್‌ಲ್ಯಾಂಡ್‌ನ ಬಿಸಿನೆಸ್ ಟ್ಯಾಂಪೆರೆ ಸಂಸ್ಥೆಗಳು ಒಪ್ಪಂದದ ಉದ್ದೇಶ ಪತ್ರಕ್ಕೆ ಸಹಿ ಹಾಕಿವೆ.

ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ (ಜಿಐಎ) ಉಪಕ್ರಮದಡಿ ರೂಪಿಸಲಾಗುತ್ತಿರುವ ಈ ಸಹಯೋಗವು ಕರ್ನಾಟಕ ಮತ್ತು ಟ್ಯಾಂಪೆರೆ ನಡುವೆ ಜಾಗತಿಕ ಕ್ರಿಯೇಟಿವ್ ಎಕಾನಮಿ ಕಾರಿಡಾರ್ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎರಡೂ ಪ್ರದೇಶಗಳಲ್ಲಿರುವ ಸೃಜನಶೀಲ ತಂತ್ರಜ್ಞಾನ ಉದ್ಯಮಗಳ ಸಾಮರ್ಥ್ಯಗಳನ್ನು ಒಗ್ಗೂಡಿಸಿ, ನವೋದ್ಯಮಗಳು, ಉದ್ಯಮ ಸಂಸ್ಥೆಗಳು, ಹೂಡಿಕೆದಾರರು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಂಪರ್ಕ ಮತ್ತು ಸಹಭಾಗಿತ್ವಕ್ಕೆ ವೇದಿಕೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಕರ್ನಾಟಕದ ನಾವೀನ್ಯತೆ ಪರಿಸರ ವ್ಯವಸ್ಥೆ ಸಾಂಪ್ರದಾಯಿಕ ತಂತ್ರಜ್ಞಾನ ಕ್ಷೇತ್ರಗಳನ್ನು ಮೀರಿ ಬೆಳೆಯುತ್ತಿದೆ. ಕ್ರಿಯೇಟಿವ್ ಟೆಕ್ನಾಲಜೀಸ್, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಇಮ್ಮರ್ಸಿವ್ ಮೀಡಿಯಾ ಕ್ಷೇತ್ರಗಳು ಭವಿಷ್ಯದ ಪ್ರಮುಖ ಅವಕಾಶಗಳಾಗಿ ಹೊರಹೊಮ್ಮುತ್ತಿವೆ. ಈ ಕ್ಷೇತ್ರಗಳಲ್ಲಿ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ವಿಫುಲ ಅವಕಾಶಗಳಿವೆ” ಎಂದು ಹೇಳಿದ್ದಾರೆ.

“ಫಿನ್‌ಲ್ಯಾಂಡ್‌ನ ಟ್ಯಾಂಪೆರೆ ಪ್ರದೇಶದೊಂದಿಗಿನ ನಮ್ಮ ಪಾಲುದಾರಿಕೆಯು ಪರಸ್ಪರ ಪೂರಕವಾಗಿರುವ ಎರಡು ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುವ ಅವಕಾಶವಾಗಿದೆ. ಇದರಿಂದ ಉದ್ಯಮಗಳು ಮತ್ತು ಪ್ರತಿಭಾವಂತ ಯುವಜನರಿಗೆ ಹೊಸ ಅವಕಾಶಗಳು ದೊರೆಯಲಿವೆ. ಉದ್ಯಮ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ವಲಯಗಳ ನಡುವಿನ ಸಹಕಾರವೂ ಬಲಗೊಳ್ಳಲಿದೆ. ನಮ್ಮ ನವೋದ್ಯಮಗಳಿಗೆ ಜಾಗತಿಕ ಮಾರುಕಟ್ಟೆಗಳ ಪ್ರವೇಶ ಕಲ್ಪಿಸುವುದು, ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಪ್ರಮುಖ ನಾವೀನ್ಯತೆ ತಾಣವಾಗಿ ರೂಪಿಸುವ ಉದ್ದೇಶದಿಂದ ಅರ್ಥಪೂರ್ಣ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.

ಪ್ರಸ್ತಾವಿತ ಕ್ರಿಯೇಟಿವ್ ಕಾರಿಡಾರ್ ಮೂಲಕ ಅನಿಮೇಷನ್, ವಿಎಫ್‌ಎಕ್ಸ್, ಡಿಜಿಟಲ್ ಸಿನಿಮಾ, ಗೇಮಿಂಗ್, ಆಗ್ಮೆಂಟೆಡ್ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ಇಮ್ಮರ್ಸಿವ್ ಮೀಡಿಯಾ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳು ಹಾಗೂ ಉದ್ಯಮ ಸಹಭಾಗಿತ್ವಕ್ಕೆ ವ್ಯವಸ್ಥಿತ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಎರಡೂ ಪ್ರದೇಶಗಳ ನವೋದ್ಯಮಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ಪರಸ್ಪರ ಮಾರುಕಟ್ಟೆ ಪ್ರವೇಶ, ತಂತ್ರಜ್ಞಾನ ವಿನಿಮಯ, ಹೂಡಿಕೆ ಮತ್ತು ಸಂಶೋಧನಾ ಸಹಕಾರಕ್ಕೆ ಇದು ನೆರವಾಗಲಿದೆ.

ಕೆ-ಟೆಕ್‌ನ ಪಾಲುದಾರ ಸಂಸ್ಥೆಯಾಗಿರುವ ಎಬಿಎಐ ಹಾಗೂ ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್ ಸಹಯೋಗದಲ್ಲಿ ಈ ಉಪಕ್ರಮವನ್ನು ಮುಂದುವರಿಸಲಾಗುತ್ತದೆ. ಉದ್ಯಮಗಳ ಭಾಗವಹಿಸುವಿಕೆ, ಕೌಶಲ್ಯ ಮತ್ತು ಪ್ರತಿಭಾ ಅಭಿವೃದ್ಧಿ, ಸಂಶೋಧನಾ ಸಹಯೋಗ ಹಾಗೂ ಅಂತರರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ಎರಡೂ ಪ್ರದೇಶಗಳ ಸೃಜನಶೀಲ ತಂತ್ರಜ್ಞಾನ ವಲಯವನ್ನು ಬೆಸೆಯುವ ಉದ್ದೇಶ ಹೊಂದಲಾಗಿದೆ.

ಈ ಒಪ್ಪಂದಕ್ಕೆ ಫಿನ್‌ಲ್ಯಾಂಡ್‌ನ ಗೌರವಾನ್ವಿತ ಕಾನ್ಸುಲ್ ಗೀತಾಂಜಲಿ ಕಿರ್ಲೋಸ್ಕರ್, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಕೆಐಟಿಎಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಫಿನ್‌ಲ್ಯಾಂಡ್‌ನ ಫಿಲ್ಮ್ ಟ್ಯಾಂಪೆರೆ ಕಾರ್ಯಕ್ರಮದ ನಿರ್ದೇಶಕಿ ಫ್ಯಾನಿ ಹೆನೊನೆನ್ ಮತ್ತು ಎಬಿಎಐ ಅಧ್ಯಕ್ಷ ಬಿರೇನ್ ಘೋಷ್ ಅವರ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.

ಕರ್ನಾಟಕ–ಫಿನ್‌ಲ್ಯಾಂಡ್ ಸಹಕಾರಕ್ಕೆ ಮತ್ತಷ್ಟು ಬಲ

ತಂತ್ರಜ್ಞಾನ, ನಾವೀನ್ಯತೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಫಿನ್‌ಲ್ಯಾಂಡ್ ನಡುವೆ ಈಗಾಗಲೇ ಸಹಕಾರದ ಸಂಬಂಧವಿದೆ. 2017ರಲ್ಲಿ ಸ್ಥಾಪನೆಯಾದ ಕರ್ನಾಟಕ–ಫಿನ್‌ಲ್ಯಾಂಡ್ ಇನ್ನೋವೇಷನ್ ಕಾರಿಡಾರ್ ಈ ಸಹಕಾರಕ್ಕೆ ಔಪಚಾರಿಕ ಸ್ವರೂಪ ನೀಡಿತ್ತು. ಇದೀಗ ಟ್ಯಾಂಪೆರೆ ಪ್ರದೇಶದೊಂದಿಗೆ ಪ್ರಸ್ತಾವಿತ ಕ್ರಿಯೇಟಿವ್ ಕಾರಿಡಾರ್ ಈ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲಿದೆ.

40ಕ್ಕೂ ಹೆಚ್ಚು ದೇಶಗಳೊಂದಿಗೆ ಸಂಪರ್ಕ ಹೊಂದಿರುವ ಹಾಗೂ 2,000ಕ್ಕೂ ಹೆಚ್ಚು ನವೋದ್ಯಮಗಳಿಗೆ ಬೆಂಬಲ ನೀಡಿರುವ ಕರ್ನಾಟಕದ ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ ಮೂಲಕ ಈ ಪಾಲುದಾರಿಕೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಜಾಗತಿಕ ಮಾರುಕಟ್ಟೆಗಳಿಗೆ ಕರ್ನಾಟಕದ ನವೋದ್ಯಮಗಳನ್ನು ಪರಿಚಯಿಸುವುದರ ಜತೆಗೆ, ಸೃಜನಶೀಲ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ, ಉದ್ಯಮಶೀಲತೆ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಈ ಸಹಯೋಗ ನೆರವಾಗಲಿದೆ.

ಸಾಂಪ್ರದಾಯಿಕ ಐಟಿ ಮತ್ತು ತಂತ್ರಜ್ಞಾನ ವಲಯದಾಚೆಗೆ ಅನಿಮೇಷನ್, ಗೇಮಿಂಗ್, ಡಿಜಿಟಲ್ ಸಿನಿಮಾ ಹಾಗೂ ಇಮ್ಮರ್ಸಿವ್ ತಂತ್ರಜ್ಞಾನಗಳಂತಹ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿಯೂ ಕರ್ನಾಟಕದ ಅಂತರರಾಷ್ಟ್ರೀಯ ಸಹಕಾರವನ್ನು ವಿಸ್ತರಿಸುವುದು ಈ ಉಪಕ್ರಮದ ಆಶಯವಾಗಿದೆ.


Share

You cannot copy content of this page