ಬೆಂಗಳೂರು: ಮುಂಬರುವ ಮುಂಗಾರಿನಲ್ಲಿ ಸುಗಮ ನಗರಾಡಳಿತ ಮತ್ತು ಪ್ರವಾಹ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ವಿಪತ್ತು ನಿರ್ವಹಣಾ ತಂಡದೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಪರ ಆಯುಕ್ತರಾದ (ಅಭಿವೃದ್ಧಿ) ಡಾ. ನವೀನ್ ಕುಮಾರ್ ರಾಜು ರವರು ವಿವಿಧ ಇಲಾಖೆಗಳ ಅಭಿಯಂತರರೊಂದಿಗೆ ಮುಂಗಾರು ಪೂರ್ವ ಸಿದ್ಧತಾ ಸಭೆ ನಡೆಸಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಮೂಲಸೌಕರ್ಯ ಕಾಮಗಾರಿ
ಪಾಲಿಕೆ ವ್ಯಾಪ್ತಿಯಲ್ಲಿ ಸದಾ ನೀರು ನಿಲ್ಲುವ ಮತ್ತು ಒಳಚರಂಡಿ ಸಮಸ್ಯೆಯಿರುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿದರು. ಜಯನಗರ ವಿಭಾಗ, ರಾಂಕಾ ಕಾಲೋನಿ, ಎಚ್‌ಎಸ್‌ಆರ್ ಲೇಔಟ್, ಐ.ಎ.ಎಸ್ ಕಾಲೋನಿ, ಸತ್ಯಸಾಯಿ ಲೇಔಟ್ ಮತ್ತು ಅನುಗ್ರಹ ಲೇಔಟ್‌ಗಳಲ್ಲಿ ತಕ್ಷಣದ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಇದರೊಂದಿಗೆ, ಜೆ.ಪಿ. ನಗರದ ಸಿಂದೂರ ಕನ್ವೆನ್ಷನ್ ಹಾಲ್ ಹತ್ತಿರ, ಸಿಲ್ಕ್ ಬೋರ್ಡ್ ಜಂಕ್ಷನ್, ಅರವಿಂದ್ ಲೇಔಟ್, ಲಕ್ಷ್ಮಿ ಲೇಔಟ್, ಸಾರಕ್ಕಿ ಸಿಗ್ನಲ್ ಮತ್ತು ಚುಂಚಘಟ್ಟ ಕೆರೆ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಮತ್ತೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹೂಳು ತೆಗೆಯುವ ಕಾರ್ಯಾಚರಣೆಗೆ ಸಿದ್ಧತೆ
ನಗರದ ರಾಜಕಾಲುವೆ ಮತ್ತು ಒಳಚರಂಡಿ ಜಾಲದ ಸಾಮರ್ಥ್ಯವನ್ನು ಹೆಚ್ಚಿಸಲು, ಎಚ್‌ಎಸ್‌ಆರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಿತವಾಗಿ ಹೂಳು ತೆಗೆಯುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದಕ್ಷಿಣ ವಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ದುರ್ಬಲ ರಾಜಕಾಲುವೆ ಪ್ರದೇಶಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಭಾರಿ ಮಳೆಯ ಸಂದರ್ಭದಲ್ಲಿ ತಕ್ಷಣದ ಪರಿಹಾರ ಒದಗಿಸಲು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಂಪ್‌ಗಳು ಮತ್ತು ಹೂಳು ತೆಗೆಯುವ ಯಂತ್ರಗಳನ್ನು ನಿಯೋಜಿಸಲಾಗುತ್ತಿದ್ದು, ತುರ್ತು ಸ್ಪಂದನೆಗಾಗಿ 8 ರಿಂದ 10 ಹೈ-ಕೆಪಾಸಿಟಿ ಸೂಪರ್ ಸಕರ್ ವಾಹನಗಳ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಳೆ ಹಾನಿ ದೂರುಗಳಿಗಾಗಿ ಪ್ರತ್ಯೇಕ ನಿಯಂತ್ರಣ ಕೊಠಡಿ ಸ್ಥಾಪಿಸಿ
ಮಳೆಹಾನಿ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಪಾಲಿಕೆಯಲ್ಲಿ ಪ್ರತ್ಯೇಕ ಸಮನ್ವಯ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿ, ಪ್ರವಾಹದ ಸಂದರ್ಭದಲ್ಲಿ ಇಲಾಖೆಗಳ ನಡುವಿನ ವಿಳಂಬವನ್ನು ತಪ್ಪಿಸಲು, ಬಿಡಬ್ಲ್ಯೂಎಸ್ಎಸ್‌ಬಿ ಮತ್ತು ಬೆಸ್ಕಾಂ ಇಲಾಖೆಗಳಿಂದ ತಲಾ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯಂತ್ರಣ ಕೊಠಡಿಯಲ್ಲಿ ಕಾಯಂ ಆಗಿ ನಿಯೋಜಿಸಲಾಗುತ್ತದೆ.
ಈ ಜಂಟಿ ಕಾರ್ಯಪಡೆ ಭಾರಿ ಮಳೆಯ ಸಮಯದಲ್ಲಿ 24/7 ಕಾರ್ಯನಿರ್ವಹಿಸಲಿದ್ದು, ತಡೆರಹಿತ ಅಗತ್ಯ ನಾಗರಿಕ ಸೇವೆಗಳನ್ನು ಖಚಿತಪಡಿಸಲಿದೆ.ಸಾರ್ವಜನಿಕ ಸುರಕ್ಷತೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಾ. ನವೀನ್ ಕುಮಾರ್ ರಾಜು ರವರು ಎಚ್ಚರಿಸಿದರು. ಅಲ್ಲದೇ ಮುಂಗಾರು ಪೂರ್ವದ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಬಿಡಬ್ಲ್ಯೂಎಸ್ಎಸ್‌ಬಿ ಹಾಗೂ ಬೆಸ್ಕಾಂನ ಇಇ, ಎಇಇ ಮತ್ತು ವಿಪತ್ತು ನಿರ್ವಹಣಾ ಸಮಾಲೋಚಕರಾದ ಡಾ. ವಿನುತಾ ರವರು ಉಪಸ್ಥಿತರಿದ್ದರು.
