ಸಮಗ್ರ ಸುದ್ದಿ

ವಿಧಾನಸಭೆಯ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸಂತಾಪ

Share

ಬೆಂಗಳೂರು: ಉಪ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ, ಅಗಲಿದ ನಾಡಿನ ಗಣ್ಯರನ್ನು ನೆನೆದು ಶ್ರದ್ಧಾಂಜಲಿ ಸಲ್ಲಿಸಿದರು.

ಇಂದು ಅಧಿವೇಶನಕ್ಕೆ ಬರುವ ವೇಳೆ ಡಿ.ಸುಧಾಕರ್‌ ಬಹಳ ನೆನಪಾಗಿಬಿಟ್ಟರು

ಡಿ. ಸುಧಾಕರ್‌: ಬಹಳ ಆತ್ಮೀಯರು ಆಗಿದ್ದ ಡಿ.ಸುಧಾಕರ್‌ ಅವರನ್ನು ನಾವು ಕಳೆದುಕೊಂಡಿದ್ದೇವೆ. ಇಂದು ವಿಧಾನಸಭೆಗೆ ಬರುವ ವೇಳೆ ಅವರು ನೆನಪಾದರು. ಪ್ರಕೃತಿ ಎಂಥೆಂತ ಆಶ್ಚರ್ಯಗಳನ್ನು ಇಟ್ಟಿದೆ ಎಂದರೆ ಅದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಸುಧಾಕರ್‌ ಅವರು ನಮ್ಮ ಜೊತೆ ತಮಾಷೆ ಮಾಡಿಕೊಂಡು ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿಕೊಂಡು, ರಾಜಕೀಯ ವಿಷಯಗಳನ್ನು ಮಾತನಾಡಿಕೊಂಡಿದ್ದರು. ಈಗ ಅವರು ನಮ್ಮೊಂದಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಧಾಕರ್‌ ಅವರು ನಮಗೆಲ್ಲ ಆತ್ಮೀಯ ಸ್ನೇಹಿತ. ನನಗಂತೂ ಅವರ ಸಹೋದರ, ಚಿಕ್ಕಪ್ಪ ಇಡೀ ಕುಟುಂಬವೇ ಬಹಳ ಹತ್ತಿರವಾಗಿದ್ದರು. ಸಣ್ಣ ಜೈನ ಸಮುದಾಯದಿಂದ ಬಂದು ಹಿರಿಯೂರು ಕ್ಷೇತ್ರದಲ್ಲಿ ಬಲಿಷ್ಠ ಸಮುದಾಯ ಉಳ್ಳ ಕ್ಷೇತ್ರದಲ್ಲಿ ಅವರು ಗೆದ್ದು ಬರುತ್ತಾರೆ ಎಂದರೆ ಜನ ಸಮುದಾಯದಲ್ಲಿ ಎಷ್ಟು ಜನಮನ್ನಣೆಯನ್ನು, ಪ್ರೀತಿಯನ್ನು ಗಳಿಸಿದ್ದರು ಎಂಬುದು ತಿಳಿಯುತ್ತದೆ. 3 ಬಾರಿ ಶಾಸಕರಾಗಿ ಅವರು ಗೆದ್ದು ಬರುತ್ತಾರೆ. ರಾಜಕಾರಣದಲ್ಲಿ ನಾವೆಲ್ಲ ಹೇಗೆ ಇರಬೇಕು ಎಂಬುದನ್ನು ಅವರ ನಡತೆ ತೋರಿಸಿಕೊಡುತ್ತದೆ. ಯಾರ ಜೊತೆಯಲ್ಲೂ ಅವರು ಕೋಪ ಮಾಡಿಕೊಳ್ಳುತ್ತಿರಲಿಲ್ಲ, ಯಾರ ಶತ್ರುತ್ವವನ್ನು ಕಟ್ಟಿಕೊಳ್ಳುತ್ತಿರಲಿಲ್ಲ. ಅಂತಹ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.

ಸರಳತೆಯಿಂದ ಬದುಕಿದ ವ್ಯಕ್ತಿ ಸಿ.ವೀರಣ್ಣನವರು

ಸಿ.ವೀರಣ್ಣ: ವೀರಣ್ಣನವರು ನನ್ನ ಕ್ಷೇತ್ರದವರು. ನನ್ನ ಕ್ಷೇತ್ರದಿಂದ 7ನೇ ವಿಧಾನಸಭೆಗೆ ಆಯ್ಕೆಯಾಗಿ, ನಂತರ ಅದೇ ಕ್ಷೇತ್ರದಿಂದ 8ನೇ ವಿಧಾನಸಭೆಗೆ ಪುನರ್‌ ಆಯ್ಕೆಯಾಗಿದ್ದರು. ಕೊರಟಗೆರೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಎಸ್‌ಟಿ ಸಮುದಾಯಕ್ಕೆ ಸೇರಿದ ಅವರು ಎರಡು ಬಾರಿ ಆಯ್ಕೆ ಆಗಿ ಬರುತ್ತಾರೆ. ನಾನು ವಿದೇಶದಿಂದ ಬಂದಾಗ ನಮ್ಮ ತಂದೆಯವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ನನಗೆ ರಾಜಕೀಯದ ಬಗ್ಗೆ ಏನು ತಿಳಿದಿರಲಿಲ್ಲ. ಆ ಸಮಯದಲ್ಲಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರು ಆಗಿದ್ದರು. ಒಬ್ಬ ಮಂತ್ರಿಯಾಗಿ ಗಾಂಧಿನಗರದಲ್ಲಿ ಸಾಮಾನ್ಯರಂತೆ ಒಂದು ಶೆಡ್‌ನಲ್ಲಿ ವಾಸಿಸುತ್ತಿದ್ದರು. ನನಗೆ ನೋಡಿ ಆಶ್ಚರ್ಯವಾಯಿತು. ಅಷ್ಟು ಸರಳತೆಯಿಂದ ಇದ್ದಂತಹ ವ್ಯಕ್ತಿ ಅವರು ಎಂದು ಸಿ.ವೀರಣ್ಣನವರ ಜೊತೆಗಿನ ನಂಟನ್ನು ನೆನಪಿಸಿಕೊಂಡರು.

ಶ್ರೀಯುತರು ಸಾಯುವುದಕ್ಕೂ ಹದಿನೈದು ದಿನದ ಮೊದಲು ನಾನು ಭೇಟಿಯಾಗಿದ್ದೆ. ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೆವು. ಆಗ ಒಂದು ಉದಾಹರಣೆ ಕೊಟ್ರು, ಒಮ್ಮೆ ಒಬ್ಬ ಡೆಪ್ಯುಟಿ ಕಮಿಷನರ್‌ಗೆ ಅವರು ಕೇಳಿದ್ರಂತೆ, ದಿನಾ ಕಾಫಿ, ತಿಂಡಿ ಎಲ್ಲ ತಂದು ಕೊಡುತ್ತೀಯಲ್ವ? ಯಾರ ಹಣದಲ್ಲಿ ತರುತ್ತೀಯಾ? ಎಂದು. ನಾನು ನಿನಗೆ ಹಣ ಕೊಡುತ್ತೇನೆ ಎಂದು ಆ ಕಮಿಷನ್‌ರಿಗೆ ಕಾಫಿ, ತಿಂಡಿಯ ಹಣ ಕೊಟ್ಟರಂತೆ. ಅಂಥಾ ಸರಳ ಜೀವನ ನಡೆಸಿದವರು ವೀರಣ್ಣನವರು. ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಈ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ನನಗೆ ವೈಯಕ್ತಿಕವಾಗಿ ಅವರು ಬಹಳಷ್ಟು ಮಾರ್ಗದರ್ಶನ ನೀಡಿದ್ದಾರೆ. ಚುನಾವಣೆ ವೇಳೆ ಹರಸಿ ಹಾರೈಸುತ್ತಿದ್ದರು. ಪರಮೇಶ್ವರ್‌ ಒಳ್ಳೆಯವರು ಅವನಿಗೆ ಮತ ಹಾಕಿ ಎನ್ನತ್ತಿದ್ದರು. ಅವರ ಹಾರೈಕೆ ನನ್ನ ಮೇಲಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿ ಕರುಣಿಸಲಿ ಎಂದರು.

ಪಾವಗಡ ಪಟ್ಟಣಕ್ಕೆ ಕುಡಿಯುವ ನೀರು ಕಲ್ಪಿಸಿದವರು ವೆಂಕಟರಮಣಪ್ಪನವರು

ವೆಂಕಟರಮಣಪ್ಪ: ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪನವರು ನನಗೆ ಸಹೋದರನಂತಿದ್ದರು. ಅತ್ಯಂತ ಸರಳ ಜೀವಿ. ಪ್ರೀತಿಗೆ ಮತ್ತೊಂದು ಹೆಸರು ಅವರು. ಸ್ನೇಹಕ್ಕೆ ಬೆಲೆ ಕಟ್ಟುವ ರೀತಿ ಅವರನ್ನು ನೋಡಿ ಕಲಿಯಬೇಕು. ಪಾವಗಡಕ್ಕೆ ಹೋಗಬೇಕು ಅಂದ್ರೆ ಆಂಧ್ರದ ಮೂಲಕ ಹೋಗಬೇಕು. ಆ ಗಡಿನಾಡಿನಲ್ಲಿ ಕನ್ನಡದ ಬಗ್ಗೆ, ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡಿದವರು ವೆಂಕಟರಮಣಪ್ಪನವರು ಎಂದು ತಿಳಿಸಿದರು.

1989ರಲ್ಲಿ ನಾನು, ವೆಂಕಟರಮಣಪ್ಪ ಅವರು ಚುನಾವಣೆಯನ್ನು ಮೊದಲ ಬಾರಿ ಗೆದ್ದು ಬಂದೆವು. ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಮೊದಲ ಪ್ರವಾಸ ಪಾವಗಡಕ್ಕೆ ಹಾಕಿದ್ದರು. ವೀರೇಂದ್ರ ಪಾಟೀಲ್‌ ಅವರನ್ನು ನೀವು ಪಾವಗಡಕ್ಕೆ ಬರಲೇಬೇಕು, ಅಲ್ಲಿ ಶನಿಮಹಾತ್ಮನ ದೇವಸ್ಥಾನವಿದೆ ಎಂದು ಕರೆಸಿಕೊಂಡಿದ್ದರು. ನಾಗಲಮಡಿಕೆಯಿಂದ ಪಾವಗಡಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಮಾಡುವುದಕ್ಕೆ ಅಡಿಗಲ್ಲು ಹಾಕುವುದಕ್ಕೆ ಮುಖ್ಯಮಂತ್ರಿಗಳು ಬಂದರು ಎಂದು ಹೇಳಿ ಮುಖ್ಯಮಂತ್ರಿಗಳನ್ನು ಪಾವಗಡ ಕ್ಷೇತ್ರಕ್ಕೆ ಕರೆಸಿಕೊಂಡಿದ್ದರ ಹಿಂದಿನ ಕಾರಣ ನಮಗೆ ಆಗ ತಿಳಿಯಿತು. ಅಷ್ಟೊಂದು ತಮ್ಮ ಕ್ಷೇತ್ರಕ್ಕೆ , ತಮ್ಮ ಜನಕ್ಕೆ ಕೆಲಸ ಆಗಬೇಕು ಎಂದು ಹೋರಾಟ ಮಾಡುತ್ತಿದ್ದಂತಹ ವ್ಯಕ್ತಿ ಅವರು. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನನಗೆ ಬಹಳಷ್ಟು ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೆಂಕಟರಮಣಪ್ಪ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.

ರಾಮಚಂದ್ರಗೌಡ: ರಾಮಚಂದ್ರ ಗೌಡರು ನನಗೆ ಬಹಳ ಪರಿಚಿತರಾಗಿದ್ದವರು. ಅವರು ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದರೂ ಕೂಡ ವೈದ್ಯಕೀಯ ಶಿಕ್ಷಣ ಸಚಿವರು ಆಗಿದ್ದಾಗ ನಾವೆಲ್ಲರೂ ಅವರ ಬಳಿಗೆ ಹೋಗುತ್ತಿದ್ದೆವು. ಬಹಳ ಪ್ರೀತಿಯಿಂದ ನಮ್ಮನ್ನು ಕಾಣುತ್ತಿದ್ದರು. ಒಂದು ಬಾರಿ ವಿಧಾನ ಪರಿಷತ್‌ ನಲ್ಲಿ ಅದ್ಯಾವುದೋ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಮಂತ್ರಿಗಳು ಸರಿಯಾದ ಉತ್ತರವನ್ನು ಕೊಡಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಎಷ್ಟು ಕೋಪ ಬಂತು ಎಂದರೆ, ಆ ಸಿಟ್ಟಿನಲ್ಲಿ ಕುರ್ಚಿ ಮೇಲೇರಿ ನಿಂತು ಪ್ರತಿಭಟನೆ ಮಾಡಿ ಸರಿಯಾದ ಉತ್ತರ ಬರುವ ತನಕ ಬಿಡಲೇ ಇಲ್ಲ. ಯಾವುದಾದರೂ ಒಂದು ವಿಷಯವನ್ನು ಅವರು ತೆಗೆದುಕೊಂಡರೆ ಏನೇ ಆದರೂ ಕೊನೆಗಾಣಿಸದೆ ಬಿಡುತ್ತಿರಲಿಲ್ಲ. ಅಂತಹ ಹೋರಾಟದ ಮನಸ್ಥಿತಿ ಅವರದ್ದು. ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದರು.

ಕೆ. ಆರ್‌. ಶ್ರೀನಿವಾಸಯ್ಯ: 1983ರಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ 7ನೇ ವಿಧಾನಸಭೆಗೆ ಆಯ್ಕೆಯಾಗಿದ್ದ ಶ್ರೀಯುತರು 8ನೇ ವಿಧಾನಸಭೆಗೆ ಅದೇ ಕ್ಷೇತ್ರದಿಂದ ಪುನರ್‌ ಆಯ್ಕೆಗೊಂಡಿದ್ದರು. ಕೋಲಾರದಂತಹ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡುತ್ತಿದ್ದದ್ದು, ಅವರ ವಿಶೇಷತೆಯಾಗಿತ್ತು. ಕೋಲಾರದಲ್ಲಿ ಅತೀ ಹೆಚ್ಚು ಕುಡಿಯುವ ನೀರಿನ ಬೋರ್‌ವೆಲ್‌ ಅನ್ನು ಕೊರೆಸಿದವರು ಅವರು. ಇಂದು ಕೋಲಾರದಲ್ಲಿ ಕೆ.ಸಿ. ವ್ಯಾಲಿಯಿಂದ ಕುಡಿಯುವ ನೀರು ಉತ್ತಮವಾಗಿರಬಹುದು. ಆದರೆ ಅಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿತ್ತು ಎಂದು ಹೇಳಿದರು.

ಎಸ್‌.ಎಚ್‌. ಪುಟ್ಟರಂಗನಾಥ್‌*: ಪುಟ್ಟರಂಗನಾಥ್‌ ಅವರು 1967 ರಲ್ಲಿ ಬೇಲೂರು ಕ್ಷೇತ್ರದಿಂದ ಗೆದ್ದು ಬಂದವರು. ಸಾಮಾಜಿಕ ಕ್ಷೇತ್ರಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅವರೂ ಕೂಡ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.

ಸೈಯದ್‌ ಯಾಸಿನ್‌: ಸೈಯದ್‌ ಯಾಸಿನ್‌ ಅವರು ಹಿರಿಯ ರಾಜಕಾರಣಿಗಳು, ನಮ್ಮೆಲ್ಲರಿಗೂ ಆತ್ಮೀಯರಾಗಿದ್ದ ಜಾಫರ್‌ ಶರೀಫ್‌ ಅವರ ಅಳಿಯ. ಅಳಿಯ ಅನ್ನುವುದಕ್ಕಿಂತ ನಮ್ಮೆಲ್ಲರ ಉತ್ತಮ ಸ್ನೇಹಿತ ಆಗಿದ್ದರು. 1999ರಲ್ಲಿ ವಿಧಾನ ಸಭೆಗೆ ಪ್ರವೇಶ ಮಾಡುತ್ತಾರೆ. ಮತ್ತು 2008ರಲ್ಲಿ ಅದೇ ಕ್ಷೇತ್ರದಿಂದ ಗೆದ್ದು ಬರುತ್ತಾರೆ. ಸ್ನೇಹ, ಸರಳತೆ, ಸಜ್ಜನಿಕೆಗೆ ಉದಾಹರಣೆಯನ್ನು ಕೊಟ್ಟ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.

ವಿ.ಶ್ರೀನಿವಾಸನ್‌: ಶ್ರೀನಿವಾಸನ್‌ ಅವರು ಯಲಹಂಕ ಕ್ಷೇತ್ರದಿಂದ ಒಂದೇ ಬಾರಿ ಗೆದ್ದಿದ್ದಾರೆ. ಅವರು ಟ್ರಾನ್ಸ್‌ಪೋರ್ಟ್‌ನ ಸಂಸ್ಥೆಯ ಮಾಲೀಕರಾಗಿ ಅನಂತರ ರಾಜಕಾರಣವನ್ನು ಬಿಟ್ಟರು.

ಹೆಚ್‌. ಎಂ. ಚಂದ್ರಶೇಖರಪ್ಪ: ಚಂದ್ರಶೇಖರಪ್ಪ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದರೂ ಕೂಡ ರಾಜಕಾರಣದಲ್ಲಿ ನಗರಸಭೆ ಅಧ್ಯಕ್ಷರಾಗಿ ಮತ್ತು ಶಾಸಕರಾಗಿ ಅನೇಕ ಜನಪರವಾದಂತಹ ಕೆಲಸಗಳನ್ನು ಮಾಡಿದವರು.

ಆರ್‌.ಜಿ.ವೆಂಕಟಾಚಲಯ್ಯ: ಸರಳ ವ್ಯಕ್ತಿತ್ವ ಉಳ್ಳವರು ವೆಂಕಟಾಚಲಯ್ಯನವರು. 1996ರಲ್ಲಿ ನಡೆದ ಉಪ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 10ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ತಿಳಿಸಿದರು.

ಹೆಚ್‌. ಹನುಮಂತಪ್ಪ: ಹನುಮಂತಪ್ಪನವರು 3 ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದವರು. ಅವರು ನನಗೆ ಸಂಬಂಧಿ ಕೂಡ ಆಗಬೇಕು. ಅವರು ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಅನೇಕ ಸಂದರ್ಭದಲ್ಲಿ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ರಾಜ್ಯದಲ್ಲೂ ಅನೇಕ ಮುಖ್ಯಮಂತ್ರಿಗಳಿಗೆ ಆ ಸಂದರ್ಭದಲ್ಲಿ ಸಲಹೆಗಳನ್ನು ಕೊಟ್ಟಂತವರು. ಅವರು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು, ರಾಷ್ಟ್ರೀಯ ಎಸ್‌.ಸಿ/ ಎಸ್.ಟಿ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಅವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ನಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.

ಎಸ್‌ ಜಾನಕಿ ಮತ್ತು ಆಶಾ ಭೋಸ್ಲೆ :ಜಾನಕಿ ಅವರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಸಂಗೀತಕ್ಕೆ ಯಾವ ಜಾತಿ, ಭೇದ ಮತ್ತು ಧರ್ಮ, ಬಣ್ಣ ಇಲ್ಲ. ಸಾವು ಕೂಡ ಇಲ್ಲ. ಸಂಗೀತ ಎಲ್ಲರಿಗೂ ಬರುವುದಿಲ್ಲ. ಅವರಿಗೆ ದೇವರು ಕೊಟ್ಟ ವರ ಅದು. 20 ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಒಬ್ಬ ವ್ಯಕ್ತಿ ಹಾಡುತ್ತಾರೆ ಎಂದರೆ ಅದೊಂದು ವಿಸ್ಮಯ. ಅಂತೆಯೇ ಆಶಾ ಭೋಸ್ಲೆ ಅವರು ರಷ್ಯನ್‌ ಭಾಷೆಯಲ್ಲೂ ಹಾಡಿದ್ದಾರೆ. ಅವರಿಗೂ ಭಗವಂತ ಸಂಗೀತವನ್ನು ವರವಾಗಿ ನೀಡಿದ್ದಾನೆ. ಸಂಗೀತದ ಈ ಮೇರು ಗಾಯಕಿಯರು ನಮ್ಮನ್ನು ಅಗಲಿದ್ದಾರೆ. ಅವರನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ. ಅವರಿಗೆ ಭಗವಂತ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಚೆನ್ನಮ್ಮ: ಭಾರತೀಯ ನಾರಿ ಹೇಗೆ ಇರಬೇಕು ಎಂಬುದಕ್ಕೆ ಉದಾಹರಣೆ ಚೆನ್ನಮ್ಮ. ಯಾರೇ ಮನೆಗೆ ಹೋದರೂ ಊಟ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅನ್ನಪೂರ್ಣೆ ಅವರು. ಆ ತಾಯಿಗೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.


Share

You cannot copy content of this page