ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೆದರ್ಲೆಂಡ್ಸ್ ಪ್ರವಾಸದೊಂದಿಗೆ ಭಾರತದ ಗತವೈಭವ, ಸಂಸ್ಕೃತಿಯ ಸಿರಿವಂತಿಕೆಯ ದ್ಯೋತಕವಾದ ಪುರಾತನ ಶಾಸನಗಳು ದೇಶಕ್ಕೆ ಮರಳಿದೆ.
ಪ್ರಧಾನಿ ಅವರು ನೆದರ್ಲೆಂಡ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೈಡೆನ್ ವಿಶ್ವವಿದ್ಯಾಲಯದ ಅಧಿಕಾರಿಗಳು 11ನೇ ಶತಮಾನದ ಐತಿಹಾಸಿಕ ಚೋಳ ತಾಮ್ರ ಫಲಕಗಳನ್ನು ಅವರಿಗೆ ಪ್ರದಾನ ಮಾಡಿದರು.
ಈ ಹಸ್ತಾಂತರ ಭಾರತ-ನೆದರ್ಲೆಂಡ್ಸ್ ಸಾಂಸ್ಕೃತಿಕ ಸಹಕಾರ ಮತ್ತು ಪರಂಪರೆಯ ಪುನಃಸ್ಥಾಪನೆಯಲ್ಲಿ ಒಂದು ಹೆಗ್ಗುರುತಾದ ಕ್ಷಣ ಎಂದು ಬಣ್ಣಿಸಲಾಗುತ್ತಿದೆ.
ವಿಶ್ವವಿದ್ಯಾನಿಲಯದ ಏಷ್ಯನ್ ಗ್ರಂಥಾಲಯದಲ್ಲಿ ಒಂದು ಶತಮಾನಕ್ಕೂ ಅಧಿಕ ಕಾಲ ʻಲೈಡೆನ್ ತಾಮ್ರ ಫಲಕಗಳುʼ ಎಂಬ ಹೆಸರಿನಲ್ಲಿ ಈ ಅಪೂರ್ವ ಕಲಾಕೃತಿಯನ್ನು ಸಂರಕ್ಷಿಸಲಾಗಿತ್ತು. ಈ ಸಂಗ್ರಹವು ಚೋಳ ವಂಶದ ದೊರೆ ಒಂದನೇ ರಾಜೇಂದ್ರ ಚೋಳನ ಮುದ್ರೆಯನ್ನು ಹೊಂದಿರುವ ಕಂಚಿನ ವೃತ್ತಾಕಾರದ ರಚನೆಯಲ್ಲಿ ಅಳವಡಿಸಲಾಗಿದ್ದ 21 ದೊಡ್ಡ ಮತ್ತು ಮೂರು ಸಣ್ಣ ತಾಮ್ರ ಫಲಕಗಳನ್ನು ಒಳಗೊಂಡಿದೆ. ಇದರಲ್ಲಿ ಐದು ಫಲಕಗಳು ಸಂಸ್ಕೃತದಲ್ಲಿ, ಹದಿನಾರು ಫಲಕಗಳು ತಮಿಳಿನ ಶಾಸನಗಳನ್ನೂ ಹೊಂದಿದೆ.
ಇದಲ್ಲದೆ ಒಂದನೇ ಕುಲೋತ್ತುಂಗ ಚೋಳನ ಮುದ್ರೆಯನ್ನು ಹೊಂದಿರುವ ಮತ್ತೊಂದು ಫಲಕಗಳ ರಚನೆ ಕೂಡ ತಮಿಳು ಶಾಸನಗಳನ್ನು ಒಳಗೊಂಡಿದೆ. ಈ ತಾಮ್ರ ಫಲಕಗಳನ್ನು ಚೋಳ ಸಾಮ್ರಾಜ್ಯದ ಅತ್ಯಂತ ಅಮೂಲ್ಯ ದಾಖಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ. ಇವುಗಳಲ್ಲಿ ಚೋಳ ಸಾಮ್ರಾಜ್ಯದ ಆಡಳಿತ, ತೆರಿಗೆ, ಭೂ ಸುಧಾರಣೆಗಳು, ನೀರಾವರಿ ವ್ಯವಸ್ಥೆಗಳು ಮತ್ತು ವ್ಯಾಪಾರ ಪದ್ಧತಿಗಳನ್ನು ವಿವರಿಸಲಾಗಿದೆ.
ಈ ಶಾಸನಗಳು ಆಗ್ನೇಯ ಏಷ್ಯಾದ ಶ್ರೀವಿಜಯ ಆಡಳಿತಗಾರರು ಸ್ಥಾಪಿಸಿದ ಬೌದ್ಧ ವಿಹಾರಕ್ಕಾಗಿ ಅನೈಮಂಗಲಂ ಗ್ರಾಮವನ್ನು ನೀಡಿದ್ದನ್ನು ದಾಖಲಿಸಲಾಗಿದೆ. ಹೀಗಾಗಿ ಸುಮಾರು ಸಾವಿರ ವರ್ಷಗಳ ಹಿಂದೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನಡುವಿನ ಬಲವಾದ ಸಮುದ್ರ, ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಅಪರೂಪದ ಪುರಾವೆಗಳನ್ನು ಈ ಫಲಕಗಳು ಒದಗಿಸುತ್ತವೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
