ಸಮಗ್ರ ಸುದ್ದಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅಗತ್ಯ ಕ್ರಮ- ಸಚಿವ ಈಶ್ವರ ಖಂಡ್ರೆ

Share

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆ ಕೊರತೆ ಇದೆ. ಹೀಗಾಗಿ, ಹವಾಮಾನದಲ್ಲಿ ವೈಪರಿತ್ಯಗಳಾಗುತ್ತಿದೆ. ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಬಗ್ಗೆ ಈ ಸಲದ ಕೆಕೆ ಆರ್ಡಿಬಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಚಿತ್ತಾಪುರ ಮತಕ್ಷೇತ್ರದ ಕಾಳಗಿ ತಾಲೂಕಿನ ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆ ನೆರವೇರಿಸಿದ‌ ನಂತರದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.

*56 ವಿವಿಧ ಪ್ರಭೇದದ ಪ್ರಾಣಿಗಳ ಲಭ್ಯತೆ

ನೂತನ ಮೃಗಾಲಯ ಕಲ್ಯಾಣ ಕರ್ನಾಟಕ ಭಾಗದ ಎರಡನೆಯ ಅತಿದೊಡ್ಡ ಮೃಗಾಲಯವಾಗಿದೆ. ಈ ಮೊದಲು ಹಂಪಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಮೃಗಾಲಯ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ಕಾರಣವಾಗಿದೆ‌. 56 ವಿವಿಧ ಪ್ರಭೇದದ ಪ್ರಾಣಿಗಳನ್ನು ಇಲ್ಲಿ ತರಿಸಲಾಗುವುದು. ಎರಡು ಸಿಂಹಗಳನ್ನು ಬನ್ನೇರುಘಟ್ಟದಿಂದ ಈಗಾಗಲೇ ತರಲಾಗಿದೆ. ಮೊಸಳೆ, ನರಿ, ಇತ್ಯಾದಿ ಪ್ರಾಣಿಗಳು ನೋಡಲು ಸಿಗುತ್ತಿವೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಪ್ರಭೇದ ಪ್ರಾಣಿ, ಪಕ್ಷಿಗಳನ್ನು ತರಿಸಲಾಗುವುದು ಎಂದರು.

ಸುಮಾರು‌ 42.33 ಎಕರೆ ಪ್ರದೇಶದಲ್ಲಿ ಒಟ್ಟು 44 ಕೋಟಿ ವೆಚ್ಚದಲ್ಲಿ ಈ ಮೃಗಾಲಯ ನಿರ್ಮಾಣ ಮಾಡಲಾಗಿದ್ದು. ಈ ಭಾಗದ ಪ್ರಮುಖ ಹಾಗೂ ಜನಾಕರ್ಷಕ ಮೃಗಾಲಯವಾಗಲಿದೆ. ಎಲ್ಲಾ ವಯೋಮಾನದ ಜನರನ್ನು ರಂಜಿಸುವ ನೆಚ್ಚಿನ ತಾಣವಾಗಲಿದೆ ಎಂದರು.

ಹಸಿರು ಹೊದಿಕೆ ಹೆಚ್ಚಿಸಲು ಅನುದಾನ ಬಿಡುಗಡೆ

ಕಕ ಭಾಗದಲ್ಲಿ ಕೇವಲ 1% ರಿಂದ. 2% ಮಾತ್ರ ಹಸಿರು ಹೊದಿಕೆ‌ ಇದೆ. ಮುಂಬರುವ ದಿನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರು ಹೊದಿಕೆ‌ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ 2026-27 ರ ಸಾಲಿನ ಕೆಕೆಆರ್ ಡಿಬಿ ಸಭೆಯಲ್ಲಿ ಈ ಪ್ರಕ್ರಿಯೆಗೆ ಬೇಕಾಗುವ ಅಗತ್ಯ ಅನುದಾನ ಬಿಡುಗಡೆ ಕುರಿತು ಚರ್ಚಿಸಲಾಗುವುದು ಎಂದರು.

ಅರಣ್ಯ ಇಲಾಖೆಯ ಸಿಬ್ಬಂದಿ ನೇಮಕ

ಅರಣ್ಯ‌ಇಲಾಖೆಯಲ್ಲಿ ಪಶುವೈದ್ಯಕೀಯ ಸಿಬ್ಬಂದಿ‌ ಹೆಚ್ಚಿಸಲು ಮುಖ್ಯಮಂತ್ರಿ ಅವರು ಅರಣ್ಯ ಇಲಾಖೆಗೆ ಅನುಮತಿ‌ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು‌ ಸಚಿವರು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಅಕ್ರಮವಾಗಿ ಮರ ಕಡಿದರೆ ಕ್ರಮ

ಅರಣ್ಯ ಪ್ರದೇಶದಲ್ಲಿ ಅಥವಾ ಸರ್ಕಾರದ‌ ಜಾಗದಲ್ಲಿ ಯಾವುದೇ ರೀತಿಯ ಮರ ಗಿಡ ಕಡಿಯುವವರ ವಿರುದ್ದ ಕ್ರಮವಹಿಸಲಾಗುವುದು‌. ಒಂದು ವೇಳೆ ಖಾಸಗಿ ಜಾಗದಲ್ಲಿ ಇರುವ ಮರ ಗಿಡಗಳನ್ನು ಕಡಿಯಲು ವಿನಾಯತಿ‌ ನೀಡಲಾಗಿದೆ ಎಂದರು.

ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕ್ರಮ

ರಾಜ್ಯದ ಅರಣ್ಯ ಭೂಮಿ ತೆರವಿಗೆ ಕ್ರಮವಹಿಸಲಾಗಿದ್ದು ರಾಜ್ಯದಲ್ಲಿ ಈಗಾಗಲೇ 10,000 ಎಕರೆಯನ್ನು ತೆರವು ಮಾಡಲಾಗಿದೆ.‌ ಇದರಲ್ಲಿ ಬೆಂಗಳೂರು ಒಂದರಲ್ಲೇ 200 ಎಕರೆ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಈ ವಿಚಾರದಲ್ಲಿ ಎಸ್ ಐ ಟಿ ರಚಿಸುವಂತೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಮೂರು ವರ್ಷದಲ್ಲಿ 11 ಲಕ್ಷ ಸಸಿ ನೆಡಲಾಗಿದೆ

ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 11 ಲಕ್ಷ ಸಸಿ ನೆಡಲಾಗಿದೆ. ಅವುಗಳನ್ನು ಸುಮಾರು‌ 90% ನೆಟ್ಟ ಸಸಿಗಳು ಬದುಕುಳಿದಿವೆ. ಈ ತರಹದ ಸಸಿಗಳಿಗೆ ಅಗತ್ಯ ಪ್ರಮಾಣ‌ ನೀರು ಒದಗಿಸಿ ಐದು ವರ್ಷಗಳ ಕಾಲ‌ ಸಂರಕ್ಷಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು‌ ಸಚಿವರು ಹೇಳಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಇಲ್ಲಿಗೆ ಸಿಂಹಗಳನ್ನು ತರಿಸಲಾಗಿದೆ. ಅವುಗಳಿಗೆ ಅಗತ್ಯ ಆಹಾರ ನೀಡಿ‌ ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಹೊಂದಿಕೆಯಾಗುವಂತೆ ಸಂರಕ್ಷಣೆ ಮಾಡಲಾಗುವುದು. ಮುಂದಿನ ಮೂರು ತಿಂಗಳ ಅವಧಿಯಲ್ಲಿ ನಿಗದಿತ ಎಲ್ಲ ಪ್ರಭೇದದ ಪ್ರಾಣಿ ಹಾಗೂ ಪಕ್ಷಿಗಳನ್ನು‌ ಇಲ್ಲಿಗೆ ತರಲಾಗುವುದು ಎಂದರು.


Share

You cannot copy content of this page