ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ “ವಿಪತ್ತು ನಿರ್ವಹಣೆಗಾಗಿ” ಸದಾ ಸನ್ನದ್ಧರಾಗಿರಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರ ಆದೇಶದ ಮೇರೆಗೆ ಎಲ್ಲಾ ನಗರ ಪಾಲಿಕೆಗಳಲ್ಲಿ ಪರೇಡ್ ನಡೆಸಲಾಗುತ್ತಿದೆ. ಅದರಂತೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಹಾಗೂ ಜಯನಗರದ ಶಾಲಿನಿ ಮೈದಾನದಲ್ಲಿ ಏರ್ಪಡಿಸಿದ್ದ ಪರೇಡ್ ಸ್ಥಳಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಮುಂಗಾರು ಮಳೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಎಲ್ಲಾ ನಗರ ಪಾಲಿಕೆಗಳಲ್ಲಿ ವಿಭಾಗವಾರು ಮಳೆಗಾಲದ ಸಿದ್ಧತೆಗಳನ್ನು ಮಾಡಿಕೊಂಡಿರುವ ಕುರಿತು ಪರೇಡ್ ನಡೆಸಲು ಅಧಿಕಾರಿಗಳಿಗೆ ಸಮನ್ವಯ ಸಭೆಯಲ್ಲಿ ಸೂಚನೆ ನೀಡಲಾಗಿತ್ತು ಎಂದರು.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಬಿಜಿಎಸ್ ಮೈದಾನದಲ್ಲಿ ಈಗಾಗಲೇ ಪರೇಡ್ ನಡೆಸಲಾಗಿದ್ದು, ದಕ್ಷಿಣ ನಗರ ಪಾಲಿಕೆಯ ಶಾಲಿನಿ ಆಟದ ಮೈದಾನದಲ್ಲಿ ಇಂದು ಜಯನಗರ ಹಾಗೂ ಪದ್ಮನಾಭನಗರ ವಿಭಾಗಗಳು ಸೇರಿ ನಡೆಸಿದ ಪರೇಡ್ ಅನ್ನು ಪರಿಶೀಲಿಸಲಾಯಿತು. ಮಳೆಗಾಲ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆಗಾಲದ ವೇಳೆ ವಿಪತ್ತು ನಿರ್ವಹಣೆಗೆ ಕಾರ್ಯನಿರ್ವಹಿಸುವ ಎಲ್ಲಾ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಮಳೆಗಾಲದಲ್ಲಿ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಒಂದು ತಂಡವಾಗಿ ಸಕ್ರಿಯವಾಗಿ ಕೆಲಸ ಮಾಡಲು ಸೂಚಿಸಿದರು.
ಆಯಾ ನಗರ ಪಾಲಿಕೆಗಳಲ್ಲಿರುವ ಶಾಶ್ವತ ನಿಯಂತ್ರಣ ಕೊಠಡಿಗಳು ಹಾಗೂ ಉಪ ವಿಭಾಗವಾರು ಸ್ಥಾಪಿಸುವ ತಾತ್ಕಾಲಿಕ ನಿಯಂತ್ರಣ ಕೊಠಡಿಗಳು ನಾಗರಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪರೇಡ್ ಮೂಲಕ ಸಕಲ ಸಿದ್ಧತೆಯ ಪರಿಶೀಲನೆ:
ಮಳೆಗಾಲದ ವೇಳೆ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಎಎಂಸಿ ತಂಡ, ವಿಪತ್ತು ನಿರ್ವಹಣೆ ತಂಡ, ಮರ ಕಟಾವು ತಂಡ, ಸಿಲ್ಟ್ ಅಂಡ್ ಟ್ರ್ಯಾಕ್ಟರ್ ತಂಡ, ಪ್ರಹಾರಿ ವಾಹನಗಳು, ಯಂತ್ರೋಪಕರಣಗಳು, ಸಿಬ್ಬಂದಿ, ಗ್ಯಾಂಗ್‌ಮನ್‌ಗಳು ಸೇರಿದಂತೆ ಮುನ್ನೆಚ್ಚರಿಕಾ ಕಾರ್ಯಗಳಿಗೆ ಬಳಸುವ ಸಂಪನ್ಮೂಲಗಳ ಪ್ರದರ್ಶನ ಮತ್ತು ಸನ್ನದ್ಧತಾ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿ ಯಂತ್ರೋಪಕರಣಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.
ಸ್ವಚ್ಛತೆಯತ್ತ ವಿಶೇಷ ಗಮನ:
ಆಯಾ ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಲ್ಟ್ ಮತ್ತು ಟ್ರ್ಯಾಕ್ಟರ್ ತಂಡಗಳು ರಸ್ತೆ ಬದಿಯ ಶೋಲ್ಡರ್ ಡ್ರೇನ್, ಗ್ರೇಟಿಂಗ್‌ಗಳ ಬಳಿಯ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆಯನ್ನು ಕಾಪಾಡಬೇಕು. ಪಾದಚಾರಿ ಮಾರ್ಗದಲ್ಲಿ ಸ್ಲ್ಯಾಬ್‌ಗಳು ಅಥವಾ ಕರ್ಬ್ ಸ್ಟೋನ್ಸ್ ಹಾನಿಗೊಳಗಾದ ಕಡೆ ತಕ್ಷಣ ಅವುಗಳನ್ನು ಅಳವಡಿಸಲು ಸೂಚನೆ ನೀಡಿದರು.
ಪರೇಡ್‌ನಲ್ಲಿ ಪ್ರದರ್ಶಿಸಲಾದ ಯಂತ್ರೋಪಕರಣಗಳು:
- ಜೆಸಿಬಿ, ಹಿಟಾಚಿ
- ಪ್ರಹಾರಿ
- ಹೂಳು ವಿಲೇವಾರಿ ಮಾಡುವ ಕಾಂಪ್ಯಾಕ್ಟರ್/ಟಿಪ್ಪರ್‌ಗಳು
- ಟ್ರ್ಯಾಕ್ಟರ್ ತಂಡಗಳು (ಸಿಲ್ಟ್ ಆಂಡ್ ಟ್ರ್ಯಾಕ್ಟರ್)
- ನೀರು ಹೊರಹಾಕುವ ವಿವಿಧ ಸಾಮರ್ಥ್ಯದ ಪಂಪ್‌ಗಳು
- ಮರ ಹಾಗೂ ಕೊಂಬೆ ಕಟಾವು ಯಂತ್ರಗಳು
- ಕಳೆ ಕತ್ತರಿಸುವ ಯಂತ್ರಗಳು
- ಶ್ರೆಡ್ಡಿಂಗ್ ಯಂತ್ರ
- ಕಸ ಗುಡಿಸುವ ಯಂತ್ರ
- ಹಗ್ಗ
- ಕೈಗವಸು
- ಗಮ್ ಬೂಟ್
- ಹಾರೆ
- ಟಾರ್ಚ್
- ಪಿಕಾಸಿ
- ಮಚ್ಚು
- ಕುಡುಗೋಲು
- ಗಡಪಾರಿ
- ರಿಫ್ಲೆಕ್ಟರ್ ಜಾಕೆಟ್
- ಬಾಂಡ್ಲಿ, ಏಣಿ ಹಾಗೂ ಇತರೆ ಸಲಕರಣೆಗಳು
ಬನ್ನೇರುಘಟ್ಟ ರಸ್ತೆ ದುರಸ್ತಿ ಕಾರ್ಯ ತ್ವರಿತ ಪೂರ್ಣಗೊಳಿಸಲು ಸೂಚನೆ:
ಬನ್ನೇರುಘಟ್ಟ ರಸ್ತೆ ಐಐಎಂ ಬಳಿ ಜಲಮಂಡಳಿ ವತಿಯಿಂದ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದ್ದು, ಕಾಮಗಾರಿ ಪೂರ್ಣಗೊಂಡ ಭಾಗಗಳಲ್ಲಿ ರಸ್ತೆ ಪುನರ್‌ನಿರ್ಮಾಣ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದ ಪರಿಣಾಮ ರಸ್ತೆಯ ಕೆಲವು ಭಾಗಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ, ಜಲಮಂಡಳಿ ವತಿಯಿಂದ ದುರಸ್ತಿಗೊಂಡ ಭಾಗಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ಪುನರ್‌ನಿರ್ಮಾಣ ಕಾರ್ಯವನ್ನು 10 ದಿನಗಳೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬನ್ನೇರುಘಟ್ಟ ರಸ್ತೆ ಬದಿಯ ಚರಂಡಿಗಳಿಗೆ ಕೊಳಚೆ ನೀರು ಹರಿಯುತ್ತಿರುವುದರಿಂದ, ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ ಚರಂಡಿಗಳಿಗೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪಾದಚಾರಿ ಮಾರ್ಗದಲ್ಲಿರುವ ತೆರೆದ ಸ್ಲ್ಯಾಬ್‌ಗಳನ್ನು ಸರಿಪಡಿಸಬೇಕು. ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕೆಲಸ ನಿರ್ವಹಿಸಲು ಸೂಚಿಸಿದರು.
ಜಲಮಂಡಳಿ ಕಾಮಗಾರಿ ಪೂರ್ಣಗೊಂಡ ಬಳಿಕ ಪಾಲಿಕೆ ವತಿಯಿಂದ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಈ ವೇಳೆ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನೂ ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನಾ ವೇಳೆ ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ, ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ರವಿ, ಬವರಾಜ್ ಕಬಾಡೆ, ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
