ಸಮಗ್ರ ಸುದ್ದಿ

ರಾಜ್ಯಾದ್ಯಂತ ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ- ಉಮಾ ಮಹದೇವನ್

Share

ಬೆಂಗಳೂರು:ಜೂನ್ 28 ರಂದು ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹದೇವನ್ ತಿಳಿಸಿದರು.

ಲಸಿಕಾ ಅಭಿಯಾನ ಕುರಿತಂತೆ ಇಂದು ವರ್ಚುವಲ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿನ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜೂನ್ 28 ರಂದು ಲಸಿಕೆಯನ್ನು ಹಾಕಲಾಗುವುದು. ನಂತರದ ಮೂರು ದಿನಗಳ ಕಾಲ ಜೂನ್ 29  ಮತ್ತು 30 ಹಾಗೂ ಜುಲೈ 1 ರಂದು ಮನೆ ಮನೆಗೆ ಭೇಟಿ ನೀಡಿ ಲಸಿಕೆಯನ್ನು ಹಾಕಲಾಗವುದು ಎಂದು ಹೇಳಿದರು.

ಲಸಿಕಾ ದಿನ ರಾಜ್ಯದಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ತೆರೆದಿಡುವಂತೆ ಸೂಚಿಸಿದ ಅವರು, ಪ್ರತಿ ಮನೆಗಳಲ್ಲಿರುವ ನವಜಾತ ಶಿಶುಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ನೀಡುವುದು. ಈ ಕುರಿತಂತೆ ಪೂರ್ವಬಾವಿಯಾಗಿ ಅಂಗನವಾಡಿ ಮಟ್ಟದಲ್ಲಿ ತಾಯಂದಿರ ಸಭೆಗಳನ್ನು ನಡೆಸಿ ಲಸಿಕಾ ದಿನಾಂಕ ಕುರಿತು ಹಾಗೂ ಲಸಿಕೆಯ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು. ಅನಾಥಾಶ್ರಮದಲ್ಲಿರುವ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಸಬೇಕು. ನಗರಸಭೆ, ಪುರಸಭೆ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಮುಂಚಿತವಾಗಿ ಪ್ರಚಾರ ಮಾಡಿ ಜಾಗೃತಿ ಮೂಡಿಸಬೇಕು ಎಂದರು.

ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀಥಲ ಪ್ಯಾಕ್ ಗಳನ್ನು ಕಾಯ್ದುಕೊಳ್ಳಲು ಕೆಪಿಟಿಸಿಎಲ್ ಇಲಾಖೆಯವರು ನಿರಂತರ ವಿದ್ಯುತ್‍ಚ್ಚಕ್ತಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ವರ್ಚುವಲ್ ಸಭೆ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲಸಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪೂರ್ವ ಸಿದ್ದತೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಾಧ್ಯವಾದಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಸ್ಥಳೀಯ ಪ್ರತಿನಿಧಿಗಳಿಂದ ಈ ಅಭಿಯಾನಕ್ಕೆ ಚಾಲನೆ ನೀಡುವಂತೆ ಸೂಚಿಸಿದ ಅವರು ಈ ಕುರಿತಂತೆ ಜಾಥಾ, ಭಿತ್ತಿಪತ್ರ, ರೇಡಿಯೋ ಜಿಂಗಲ್ಸ್ ಮೂಲಕ ಲಸಿಕಾ ದಿನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.


Share

You cannot copy content of this page