ಸಮಗ್ರ ಸುದ್ದಿ

ಮಳೆಗಾಲದ ಮುಂಜಾಗ್ರತಾ ಕ್ರಮ: ಚರಂಡಿಗಳ ಹೂಳೆತ್ತುವ ಹಾಗೂ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ

Share

ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಅಡಿ ಹಾಗೂ ವಿಶೇಷ ಅಭಿವೃದ್ಧಿ ಯೋಜನೆ ಅಡಿಯ ಚರಂಡಿ ಹೂಳೆತ್ತುವ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಾದ ಸಿ.ವಿ. ರಾಮನ್ ನಗರ, ಶಾಂತಿನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಮತ್ತು ಶಿವಾಜಿನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗಾಗಲೇ ಕಳೆದ 1 ತಿಂಗಳಿನಿಂದ ಸನ್ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಅಡಿ ಹಾಗೂ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚರಂಡಿ ಹೂಳೆತ್ತುವ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ಮುಂಗಾರು ಮಳೆಗಾಲದ ಮುಂಜಾಗೃತಾ ಕ್ರಮವಾಗಿ ಚರಂಡಿಗಳಲ್ಲಿನ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲು ಕೇಂದ್ರ ನಗರ ಪಾಲಿಕೆಯ 6 ವಿಭಾಗಗಳ ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮರಗಳ –ರೆಂಬೆ ಕೊಂಬೆ ತೆರವಿಗೆ ಕೂಡಲೇ ಕ್ರಮ ವಹಿಸಿ:

ಮಳೆ-ಗಾಳಿಗೆ ಬಿದ್ದ ಮರಗಳ ತೆರವಿಗೆ ಕೂಡಲೇ ಕ್ರಮ ವಹಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ, ನುರಿತ ಸಿಬ್ಬಂದಿಗಳ ಜೊತೆಗೆ ಅಗತ್ಯ ಸಲಕರಣೆಗಳನ್ನು ವ್ಯವಸ್ಥೆಗೊಳಿಸಲು ಸೂಚನೆ ನೀಡಿದ್ದಾರೆ.

ಮಳೆ ನೀರುಗಾಲುವೆ ಹೂಳೆತ್ತಿ:

ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಾಗ ಬೃಹತ್ ಮಳೆನೀರುಗಾಲುವೆಗಳು ಹಾಗೂ ಚರಂಡಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಉಂಟಾಗಿ ಬೃಹತ್ ಮಳೆನೀರುಗಾಲುವೆ ಹಾಗೂ ಚರಂಡಿ ಅಕ್ಕಪಕ್ಕದ ಮನೆಗಳು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜಲಾವೃತವಾಗದಂತೆ ತಡೆಯಲು ನೀರು ಸರಾಗವಾಗಿ ಹರಿದು ಹೋಗಲು ಅನುವಾಗುವಂತೆ ಶೇಖರಣೆಯಾಗಿರುವ ಹೂಳನ್ನು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಹಾಗೂ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗೆ ವೇಗ ನೀಡಲು ಸೂಚನೆ ನೀಡಿದ್ದಾರೆ.

ಡಾಂಬರೀಕರಣ ಕಾಮಗಾರಿ ತ್ವರಿತಗೊಳಿಸಿ:

ಪ್ರಗತಿಯಲ್ಲಿರುವ ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ತ್ವರಿತಗೊಳಿಸಲು ಹಾಗೂ ಸಿ.ಸಿ. ರಸ್ತೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಲು ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳು ಉಂಟಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಹಾಗೂ ಉಂಟಾಗುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಆಯುಕ್ತರಾದ ರಾಜೇಂದ್ರ ಚೋಳನ್ ರವರು ಆದೇಶಿಸಿದ್ದಾರೆ.


Share

You cannot copy content of this page