ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಇಂದು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಇಲಾಖೆಯ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿಗಳು, ಜೂನ್ 1 ರಂದು ಶಿವಮೊಗ್ಗದಲ್ಲಿ ಬಹುನಿರೀಕ್ಷಿತ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (KPS) ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಪ್ರಕಟಿಸಿದರು.
ಒಂದೇ ಸೂರಿನಡಿ ಎಲ್.ಕೆ.ಜಿ ಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ
ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈ ವರ್ಷ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ತಕ್ಷಣವೇ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಿಎಂ ಸೂಚನೆ ನೀಡಿದ್ದಾರೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು:
ಪ್ರವೇಶಾವಕಾಶ: ಪ್ರತಿ ಕೆಪಿಎಸ್ ಶಾಲೆಯಲ್ಲಿ ಒಟ್ಟು 1200 ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದೆ.
ಎಲ್.ಕೆ.ಜಿಯಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ಲಭ್ಯವಿರಲಿದೆ.
ಸಾರಿಗೆ ಸೌಲಭ್ಯ: ದೂರದ ಊರುಗಳಿಂದ ಬರುವ ಮಕ್ಕಳಿಗೆ ಶಾಲಾ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಕಾಲಮಿತಿ: ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ 800 ಶಾಲೆಗಳು ಸಂಪೂರ್ಣ ಮೂಲಸೌಕರ್ಯಗಳೊಂದಿಗೆ ಸಿದ್ಧವಾಗಬೇಕು ಎಂದು ಸಿಎಂ ಗಡುವು ನೀಡಿದ್ದಾರೆ.
15 ಸಾವಿರ ಶಿಕ್ಷಕರ ಭರ್ತಿ:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ತಕ್ಷಣವೇ 15,000 ಶಿಕ್ಷಕರನ್ನು ಭರ್ತಿ ಮಾಡಲು ಅಗತ್ಯವಿರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ತಕ್ಷಣ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಕಡಕ್ ಸೂಚನೆ ನೀಡಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ಜೊತೆಗೆ ಉಚಿತ ನೋಟ್‌ಬುಕ್ ವಿತರಿಸುವ ಬೇಡಿಕೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ.
SSLC ಮತ್ತು ಪಿಯುಸಿ ಫಲಿತಾಂಶದಲ್ಲಿ ಐತಿಹಾಸಿಕ ದಾಖಲೆ!– ಮಧುಬಂಗಾರಪ್ಪ
ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಇಲಾಖೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆಗೆ ಮಾಹಿತಿ ನೀಡಿದರು. ವಿಶೇಷವೆಂದರೆ ಈ ಬಾರಿ ಯಾವುದೇ ವಿದ್ಯಾರ್ಥಿಗೂ ಗ್ರೇಸ್ ಅಂಕ ನೀಡಿಲ್ಲ ಮತ್ತು ಇನ್ಮುಂದೆ ಎಸ್‌ಎಸ್‌ಎಲ್‌ಸಿ ಮೂರನೇ ಅಂತಿಮ ಪರೀಕ್ಷೆ ಇರುವುದಿಲ್ಲ ಎಂದು ತಿಳಿಸಿದರು
ಫಲಿತಾಂಶದ ತುಲನಾತ್ಮಕ ನೋಟ:
ಎಸ್‌ಎಸ್‌ಎಲ್‌ಸಿ: ಈ ಬಾರಿ ಶೇ. 94.10ರಷ್ಟು ದಾಖಲೆ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತ ಶೇ. 14.06ರಷ್ಟು ಹೆಚ್ಚಳವಾಗಿದೆ. ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 766 ರಿಂದ 2393ಕ್ಕೆ ಏರಿಕೆಯಾಗಿದೆ.
ದ್ವಿತೀಯ ಪಿಯುಸಿ: 2025ರಲ್ಲಿ ಶೇ. 73.45 ರಷ್ಟಿದ್ದ ಉತ್ತೀರ್ಣ ಪ್ರಮಾಣ, 2026ರಲ್ಲಿ ಶೇ. 86.48ಕ್ಕೆ ಏರಿಕೆಯಾಗುವ ಮೂಲಕ ಶೇ. 13.03 ರಷ್ಟು ಭರ್ಜರಿ ಪ್ರಗತಿ ಸಾಧಿಸಿದೆ.
ನಗರವನ್ನು ಹಿಂದಿಕ್ಕಿದ ಗ್ರಾಮೀಣ ಪ್ರತಿಭೆಗಳು:
ಪರೀಕ್ಷಾ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿ ಗ್ರಾಮೀಣ ಪ್ರದೇಶದ ಫಲಿತಾಂಶ ಶೇ. 94.80 ಹಾಗೂ ನಗರ ಪ್ರದೇಶದ ಫಲಿತಾಂಶ ಶೇ.93.20 ಬಂದಿದೆ.
ದ್ವಿತೀಯ ಪಿಯುಸಿ ಯಲ್ಲಿ ಗ್ರಾಮೀಣ ಪ್ರದೇಶದ ಫಲಿತಾಂಶ ಶೇ. 87.62 ಮತ್ತು ನಗರಪ್ರದೇಶದಲ್ಲಿ ಶೇ 85.95 ರಷ್ಟು ಫಲಿತಾಂಶ ಬಂದಿದೆ.
.ಹಿಂದುಳಿದ ವರ್ಗಗಳು ಮತ್ತು ಕಲ್ಯಾಣ ಕರ್ನಾಟಕದ ಸಾಧನೆ:
ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯಾಗಿದೆ. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ. 18 ರಷ್ಟು ಹೆಚ್ಚಳವಾಗಿದ್ದರೆ, ಕೆಟಗರಿ-1 ರಲ್ಲಿ ಶೇ. 16.6, 2ಎ ನಲ್ಲಿ ಶೇ. 11.5, 2ಬಿ ನಲ್ಲಿ ಶೇ. 18, 3ಎ ನಲ್ಲಿ ಶೇ. 8.12 ಹಾಗೂ 3ಬಿ ನಲ್ಲಿ ಶೇ. 10 ರಷ್ಟು ಫಲಿತಾಂಶ ಸುಧಾರಿಸಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 2 ರಷ್ಟು ಹೆಚ್ಚಾಗಿದೆ.
ಯಶಸ್ಸಿನ ರಹಸ್ಯವೇನು?
ಈ ಅದ್ಭುತ ಫಲಿತಾಂಶದ ಹಿಂದೆ ಶಿಕ್ಷಣ ಇಲಾಖೆಯ ವ್ಯವಸ್ಥಿತ ಶ್ರಮವಿದೆ ಎಂದು ಸಚಿವರು ವಿವರಿಸಿದರು. ಮುಖ್ಯಮಂತ್ರಿಯವರ ನಿರ್ದೇಶನದಂತೆ ರಾಜ್ಯಾದ್ಯಂತ ಪೋಷಕರು-ಶಿಕ್ಷಕರ ಸಭೆ ನಡೆಸಿ ಜಾಗೃತಿ ಮೂಡಿಸಲಾಗಿತ್ತು. ಕೊರತೆ ಇದ್ದ ಕಡೆ ಅತಿಥಿ ಶಿಕ್ಷಕರ ನೇಮಕ, ಪಠ್ಯ ಆಧಾರಿತ ವಿಶೇಷ ಅಧ್ಯಯನ ಕ್ರಮ, ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗಳು, ಶಿಕ್ಷಕರಿಗೆ ನಿರಂತರ ತರಬೇತಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಮ್ಮಿಕೊಂಡ ವಿಶೇಷ ತರಬೇತಿ ಕಾರ್ಯಕ್ರಮಗಳು ಈ ಐತಿಹಾಸಿಕ ಯಶಸ್ಸಿಗೆ ಕಾರಣವಾಗಿವೆ.
