ಬೆಂಗಳೂರು:ಎಬೋಲಾ ಪ್ರಕರಣ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ. ಆರೋಗ್ಯ ಇಲಾಖೆ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಶದಲ್ಲಿ ಇನ್ನೂ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ, ಅಕ್ಕ ಪಕ್ಕದ ದೇಶಗಳಲ್ಲಿಯೂ ಎಬೋಲಾ ಪ್ರಕರಣ ದಾಖಲಾಗಿಲ್ಲ. ಆದರೂ ಕೂಡ ನಾವು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.
ಆಫ್ರಿಕನ್ ದೇಶಗಳಾದ ಉಗಾಂಡಾ, ಕಾಂಗೋ ಮುಂತಾದ ದೇಶಗಳಿಂದ ಬಂದವರನ್ನು 21 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗುವುದು. ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸುತ್ತೇನೆ. ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದೆ. ಕೇಂದ್ರ ಸರ್ಕಾರವೂ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ,
ಕೆಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ಸಮಸ್ಯೆಗೆ ಸಿಲುಕಲಿದೆ. ದೇಶದ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು
ರಾಹುಲ್ ಗಾಂಧಿಯವರು ಆರು ತಿಂಗಳ ಹಿಂದೆಯೇ ಹೇಳಿದ್ದರು.
ಅನವಶ್ಯಕವಾಗಿ ನಡೆಯುತ್ತಿರುವ ಯುದ್ಧದಿಂದ ಈ ಪರಿಸ್ಥಿತಿ ಬಂದಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಕೇಂದ್ರ ಸರ್ಕಾರ ಮೊದಲಿನಿಂದಲೂ ಸರಿಯಾಗಿ ನಡೆದುಕೊಂಡಿಲ್ಲ. ಭಾರತದ ನಿಲುವು ಏನು ಎನ್ನುವುದನ್ನು ಹೇಳಿಲ್ಲ. ಪ್ರವಾಸ ಮಾಡಬೇಡಿ, ಚಿನ್ನ ಖರೀದಿಸಬೇಡಿ ಇಂತಹ ಹೇಳಿಕೆ ನೀಡುತ್ತ ಮೋದಿಯವರು ಕಾಲ ಕಳೆಯುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸೋತಿದ್ದಾರೆ ಎಂದರು.
ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ, ಬ್ಯಾರಲ್ ಗೆ 120 ಡಾಲರ್ ವರೆಗೂ ಹೋಗಿತ್ತು. ಆದರೆ ಜನರಿಗೆ ತೊಂದರೆ ಆಗದಂತೆ ಅವರು ಕ್ರಮ ಕೈಗೊಂಡಿದ್ದರು. ಆದರೆ ಈಗ ಎನಾಗಿದೆ ನೋಡಿ. ಈವರೆಗೆ ಕಡಿಮೆ ದರ ಇದ್ದಾಗಲೂ ಕೇಂದ್ರ ಸರ್ಕಾರ ಪೆಟ್ರೋಲ್ ದರ ಇಳಿಸಿರಲಿಲ್ಲ. ಬೇಕಾದಷ್ಟು ಲಾಭ ಮಾಡಿಕೊಂಡಿತ್ತು. ಈಗ ಯುದ್ಧದ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆದಾಗ ಟ್ಯಾಕ್ಸ್ ದರ ಇಳಿಸಿ ಜನರಿಗೆ ಅನುಕೂಲ ಮಾಡುವ ಬದಲು ತೈಲದರ ಏರಿಕೆಯನ್ನು ನಿರಂತರವಾಗಿ ಮಾಡುತ್ತಿದೆ. ಜನಸಾಮಾನ್ಯರ ಬದುಕನ್ನೇ ತೊಂದರೆಗೆ ಸಿಲುಕಿಸಿದೆ.
ಮೋದಿಯವರಿಗೆ ಚುನಾವಣೆ ಗೆಲ್ಲುವುದು ಮಾತ್ರ ಪ್ರಾಮುಖ್ಯತೆ. ಜನರ ಕಷ್ಟ ಬೇಕಾಗಿಲ್ಲ. ಸಮಾಜವನ್ನು ವಿಭಜಿಸಿ, ಶಾಂತಿ, ಸಹಬಾಳ್ವೆಯನ್ನು ಹಾಳು ಮಾಡಿ, ಇನ್ಸ್ಟಾಗ್ರಾಂ ನಲ್ಲಿ ಫೋಟೋ, ವಿಡಿಯೋ ಹಾಕುತ್ತ ಕಾಲ ಕಳೆಯುತ್ತಿದ್ದಾರೆ. ಸಾರ್ವಜನಿಕರು ತೊಂದರೆಯಲ್ಲಿ ಬೇಯುತ್ತಿದ್ದಾರೆ ಎಂದು ಹೇಳಿದರು.
ನೀಟ್ ಪರೀಕ್ಷೆ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಅನುಮತಿ ನೀಡಿದರೆ ರಾಜ್ಯ ಮಟ್ಟದಲ್ಲಿ ನಾವು ನೀಟ್ ಪರೀಕ್ಷೆ ನಡೆಸಲು ಸಿದ್ಧ. ಪ್ರತಿ ವರ್ಷವೂ ಕೇಂದ್ರ ಸರಕಾರ ನೀಟ್ ಪರೀಕ್ಷೆಯಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ.
ಜವಾಬ್ದಾರಿಯುತವಾಗಿ ಪರೀಕ್ಷೆ ನಡೆಸದೆ, ಹೊಣೆಗಾರಿಕೆ ಯಿಲ್ಲದಂತೆ ವ್ಯವಹರಿಸುತ್ತಿದೆ. ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಪೋಷಕರ ಗೋಳು ಕೇಳುವವರು ಯಾರು? ಜನಸಾಮಾನ್ಯರ ಕಷ್ಟ ಕೇಂದ್ರ ಸರ್ಕಾರಕ್ಕೆ ಅರ್ಥವೇ ಆಗುತ್ತಿಲ್ಲ. ನಾವು ಪ್ರಾರಂಭಿಸಿದ ಸಿಇಟಿ ಮಾದರಿಯಾಗಿ ನಡೆಯುತ್ತಿದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
