ಸಮಗ್ರ ಸುದ್ದಿ

ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್

Share

ಬೆಂಗಳೂರು:ಯುವಕರು ಕ್ರೀಡೆಯತ್ತ ಆಸಕ್ತಿ ವಹಿಸಬೇಕಾದರೆ, ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕಾದರೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಮನವಿ ಮಾಡಿದರು.

ಬೆಂಗಳೂರಿನ ಸೂರ್ಯನಗರದ ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುರೇಶ್ ಅವರು ಮಾತನಾಡಿದರು.

ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ ಮೈದಾನ, ಹಾಕಿ ಕ್ರೀಡಾಂಗಣ ಹೊರತುಪಡಿಸಿ ನಮ್ಮ ನಗರದಲ್ಲಿ ಬೇರೆ ಕ್ರೀಡಾಂಗಣ ಕಟ್ಟಲು ಆಗಿಲ್ಲ. ಹೀಗಾಗಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಅರ್ಥ ಬಂದಿದೆ. ಈ ವಿಚಾರವಾಗಿ ಎಷ್ಟೇ ಟೀಕೆ ಬಂದರೂ ವಸಚಿ ಸಚಿವರು ಹಾಗೂ ಗೃಹಮಂಡಳಿ ಅಧ್ಯಕ್ಷರಾದ ಶಿವಲಿಂಗೇಗೌಡರು ಶಂಕುಸ್ಥಾಪನೆ ನೆರವೇರಿಸುವ ಹಂತಕ್ಕೆ ತಂದಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಪರವಾಗಿ ನಾನು ಅವರಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ ಎಂದರು.

ಗೃಹ ಮಂಡಳಿ ವಿಶೇಷವಾದ ಚಿಂತನೆ ಮೂಲಕ ಆನೇಕಲ್ ತಾಲ್ಲೂಕಿನಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಿದ್ದು, ಅಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದೆ. ಆನೇಕಲ್ ತಾಲ್ಲೂಕು ರಾಜ್ಯದ ಗಡಿ ಭಾಗ, ಇಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ಅಗತ್ಯವೇನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬೆಂಗಳೂರಿನ ಅರ್ಧ ಉದ್ಯೋಗಸ್ಥ ಜನ ಇಲ್ಲಿಂದಲೇ ಹೋಗಿ, ಕೆಲಸ ಮಾಡಿ ಇಲ್ಲಿಗೆ ವಾಪಸ್ಸಾಗುತ್ತಾರೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಆನೇಕಲ್ ಬೆಂಗಳೂರು ನಗರ ಜಿಲ್ಲೆಯ ಭಾಗ” ಎಂದು ಹೇಳಿದರು.

ಬೆಂಗಳೂರಿನ ಹೊರ ಪ್ರದೇಶ ಎಂಬ ಭಾವನೆ ಬೇಡ. ಈ ಹಿಂದೆ ಈ ಭಾಗದಲ್ಲಿ ಮಾಜಿ ಸಚಿವರಾದ ಸೋಮಣ್ಣ ಅವರು ಭೂಸ್ವಾಧೀನ ಪ್ರಕ್ರಿಯೆ ಮಾಡುವಾಗ ಇಲ್ಲಿ ಸುತ್ತಮುತ್ತಲು ಸಾಕಷ್ಟು ಕೈಗಾರಿಕಾ ಪ್ರದೇಶವಿದ್ದು, ಇಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಇದರಿಂದ ಈ ಭಾಗ ಹಾಗೂ ಬೆಂಗಳೂರಿಗೆ ಅನುಕೂಲವಾಗಲಿದೆ ಎಂದು ಅವರಲ್ಲಿ ಮನವಿ ಮಾಡಿದ್ದೆ. ನಮ್ಮ ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ನನ್ನ ಮನವಿಯನ್ನು ಆಲಿಸಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಈ ಕ್ರೀಡಾಂಗಣ

“ಯುವಕರಿಗೆ ಪ್ರೋತ್ಸಾಹ ನೀಡಲು ನಾವು ಈ ತೀರ್ಮಾನ ಮಾಡಿದ್ದೇವೆ. ಇಲ್ಲಿ ಕೆಲವು ಮೂಲಭೂತ ಸೌಕರ್ಯ ಕೊರತೆ ಇದೆ. ಅದನ್ನು ಸರಿಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದೇ ಭಾಗದಲ್ಲಿ 6 ಪಥದ ಎಸ್ ಟಿಆರ್ ಆರ್ ರಸ್ತೆ ಬರುತ್ತಿದ್ದು, 1 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಇಲ್ಲಿಂದ 4 ಕಿ.ಮೀ. ದೂರದಲ್ಲಿ ಅತ್ತಿಬೆಲೆಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸಾಧಿಸಬಹುದಾಗಿದೆ” ಎಂದು ವಿವರಿಸಿದರು.

ರೈತರಿಗೆ 50:50 ಅನುಪಾತದಲ್ಲಿ ನಿರ್ಮಾಣವಾದ ಮೊದಲ ಬಡಾವಣೆ

ನಾನು ಈ ಭಾಗದ ರೈತರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಕಾರಣ, ಎಲ್ಲಕಡೆಗಳಲ್ಲಿ ಹೋರಾಟಗಳು ನಡೆಯುತ್ತವೆ. ಆದರೆ ಈ ಭಾಗದಲ್ಲಿ ನಾನು, ಶಾಸಕರಾದ ಶಿವಣ್ಣ ಹಾಗೂ ಕೃಷ್ಣಪ್ಪ ಅವರು ಭೂಮಿ ಬಿಟ್ಟುಕೊಡಲು ಮನವಿ ಮಾಡಿದಾಗ ರೈತರು ಒಪ್ಪಿದ್ದಾರೆ. 50:50 ಅನುಪಾತದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಬಡಾವಣೆ ಇದಾಗಿದೆ. ಈ ಯೋಜನೆ ಆರಂಭದಲ್ಲಿ ಈ ಭಾಗದಲ್ಲಿ ಅಡಿಗೆ 900 ಅಥವಾ 1 ಸಾವಿರ ರೂ.ಗೆ ಹೋಗಬಹುದು ಎಂಬ ಚಿಂತನೆ ಮಾಡಲಾಗಿತ್ತು. ಆದರೆ ಕೆ.ಹೆಚ್ ಬಿ ಅವರು 10,600 ಅಡಿಗಳನ್ನು ರೈತರಿಗೆ ನೀಡುವ ವ್ಯವಸ್ಥೆ ಮಾಡಿದ್ದಾರೆ. ಅದರ ಬೆಲೆ ಕನಿಷ್ಠ 4.5ರಿಂದ 5 ಕೋಟಿ ಆಗಲಿದೆ. ನೀವು ನಿಮ್ಮ ಆಸ್ತಿ ಉಳಿಸಿಕೊಂಡಿದ್ದಕ್ಕೆ ಅದಕ್ಕೆ ಉತ್ತಮ ಬೆಲೆ ಸಿಕ್ಕಿದೆ” ಎಂದರು.

ರಸ್ತೆ ಅಗಲೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಬೇಕು, ಆದಷ್ಟು ಬೇಗ ಮೆಟ್ರೋ ಸಂಪರ್ಕ ಕಲ್ಪಿಸಬೇಕು

“ನಮ್ಮ ತೀರ್ಮಾನಗಳು ಈ ಭಾಗದ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳಲಾಗಿದೆ. ಕೆಲ ತಿಂಗಳ ಹಿಂದೆ ಈ ಭಾಗಕ್ಕೆ ಉಪಮುಖ್ಯಮಂತ್ರಿಗಳು ಬಂದಿದ್ದಾಗ, ಇಲ್ಲಿಗೆ ಮೆಟ್ರೋ ಸಂಪರ್ಕ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದೆ. ಆದಷ್ಟು ಬೇಗ ಈ ಯೋಜನೆಗಳನ್ನು ಜಾರಿಗೆ ತರಬೇಕು, ಈ ಬಡಾವಣೆಗೆ ಬರುವ ಒಂದೆರಡು ರಸ್ತೆಗಳ ಅಗಲೀಕರಣಕ್ಕೆ ಒಪ್ಪಿಗೆ ನೀಡಬೇಕು” ಎಂದು ಮನವಿ ಮಾಡಿದರು.


Share

You cannot copy content of this page