ಸಮಗ್ರ ಸುದ್ದಿ

ಓಕಳೀಪುರಂ ಅಷ್ಟಪಥ ಕಾರಿಡಾರ್ ರೈಲ್ವೆ ಕೆಳಭಾಗದ ಕಾಮಗಾರಿ 25 ದಿನಗಳಲ್ಲಿ ಪೂರ್ಣಗೊಳಿಸಿ: ಮಹೇಶ್ವರ್ ರಾವ್ |ಅಕ್ಟೋಬರ್ ಅಂತ್ಯದೊಳಗೆ ಡಾ. ರಾಜ್‌ಕುಮಾರ್ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣ

Share

ಬೆಂಗಳೂರು:ಓಕಳೀಪುರಂ ಅಷ್ಟಪಥ ಕಾರಿಡಾರ್‌ನ ಚೆನ್ನೈ ರೈಲ್ವೆ ಕೆಳಭಾಗದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ಚೆನ್ನೈ ರೈಲ್ವೆ ಹಳಿ ಕೆಳಭಾಗದಲ್ಲಿ ರೈಲ್ವೆ ಇಲಾಖೆ ವತಿಯಿಂದ ಈಗಾಗಲೇ ಎರಡು ಬಾಕ್ಸ್ ಪುಶಿಂಗ್ ಕಾರ್ಯಗಳು ಪೂರ್ಣಗೊಂಡಿವೆ. ಈ ಸಂಬಂಧ, ಮೆಜೆಸ್ಟಿಕ್‌ನಿಂದ ರಾಜಾಜಿನಗರದ ಕಡೆಗೆ ತೆರಳುವ ಮಾರ್ಗದ ಒಂದು ಬಾಕ್ಸ್ ಭಾಗದಲ್ಲಿ ವಾಹನಗಳ ಸಂಚಾರಕ್ಕಾಗಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯವನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ಸ್ಥಳದಲ್ಲಿ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ಬಾಕ್ಸ್ ಮಾರ್ಗದ ಸಂಪರ್ಕ ರಸ್ತೆ ನಿರ್ಮಾಣ, ಮಳೆನೀರು ಹರಿದು ಹೋಗಲು 1200 ಮಿ.ಮೀ. ವ್ಯಾಸದ ನೀರುಗಾಲುವೆ ನಿರ್ಮಾಣ, ಸುಮಾರು 63 ಮೀಟರ್ ಉದ್ದದ ರಿಟೈನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ಸ್ಥಳದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಬೇಕಿದ್ದು, ಶೀಘ್ರವಾಗಿ ಕಾಮಗಾರಿ ಆರಂಭಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಮಾಧವನಗರ ರೈಲ್ವೆ ಕೆಳಸೇತುವೆ ಪರಿಶೀಲನೆ:

ಶಿವಾನಂದ ವೃತ್ತದ ಸಮೀಪದ ಮಾದವನಗರ ರೈಲ್ವೆ ಕೆಳಸೇತುವೆ ಬಳಿ ಪರಿಶೀಲನೆ ನಡೆಸಿದ ವೇಳೆ, ಮಳೆನೀರು ಹರಿವಿಗಾಗಿ ಅಳವಡಿಸಲಾಗಿರುವ ಗ್ರೇಟಿಂಗ್‌ಗಳನ್ನು ಸದಾ ಸ್ವಚ್ಛವಾಗಿರಿಸುವಂತೆ ಸೂಚಿಸಿದರು. ಜೊತೆಗೆ, ಗ್ರೇಟಿಂಗ್‌ಗಳ ಕೆಳಭಾಗ ಹಾಗೂ ಸುತ್ತಮುತ್ತಲಿನ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೈಗೊಂಡು ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಿ ರೈಲ್ವೆ ಕೆಳಸೇತುವೆ ಬಳಿ ನೀರು ನಿಲ್ಲದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ, ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ಸ್ಥಳದಲ್ಲಿ ಪಾದಚಾರಿ ಮಾರ್ಗದ ಮೇಲೆ ಮರದ ಅವಶೇಷಗಳು ಹಾಗೂ ಕಟ್ಟಡ ಭಗ್ನಾವಶೇಷಗಳು ಬಿದ್ದಿರುವುದನ್ನು ಗಮನಿಸಿ, ಅವುಗಳನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದರು. ಅಲ್ಲದೆ, ರಸ್ತೆಯ ಭಾಗಕ್ಕೆ ವಾಲಿರುವ ಮರದ ಕೊಂಬೆಗಳನ್ನು ಕತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಸ್ತೆ ಭಾಗದಲ್ಲಿ ಕೆಪಿಟಿಸಿಎಲ್ ವತಿಯಿಂದ ಕಾಮಗಾರಿ ನಡೆಸಿದ ಬಳಿಕ ಪುನಶ್ಚೇತನ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವುದನ್ನು ಗಮನಿಸಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯಾವುದೇ ಇಲಾಖೆಯು ರಸ್ತೆ ದುರಸ್ತಿ ಅಥವಾ ಇತರೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಗುಣಮಟ್ಟವನ್ನು ಕಾಪಾಡಿಕೊಂಡು ಪುನಶ್ಚೇತನ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.

ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣ:

ಡಾ: ರಾಜ್‌ಕುಮಾರ್ ರಸ್ತೆಯಲ್ಲಿ ನವರಂಗ್‌ನಿಂದ ಸ್ಟಾರ್ ಬಜಾರ್ ಸಿಗ್ನಲ್‌ವರೆಗೆ 1.8 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಒಂದು ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ನಂತರ ಮತ್ತೊಂದು ಬದಿಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಅಕ್ಟೋಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಲ್ಲದೆ, ಮಲ್ಲೇಶ್ವರಂ 8ನೇ ಮುಖ್ಯ ರಸ್ತೆಯ 800 ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸೈಡ್ ಡ್ರೇನ್, ಪಾದಚಾರಿ ಮಾರ್ಗ ಸೇರಿದಂತೆ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಹಾಗೆಯೇ ಚಿತ್ರಾಪುರ ಕ್ರಾಸ್‌ನಿಂದ 18ನೇ ಅಡ್ಡರಸ್ತೆಯವರೆಗೆ 425 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಅದರ ಸಮರ್ಪಕ ನಿರ್ವಹಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆ ವೇಳೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಹಾಗೂ ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ., ಬೆಂ.ಘ.ತ್ಯಾ.ನಿ. ನಿಯಮಿತದ ಸಿಇಒ ಕರೀಗೌಡ, ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟ ಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಬಸವರಾಜ್ ಕಬಾಡೆ, ಮಾದೇಶ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ರೈಲ್ವೆ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page