ಹುಬ್ಬಳ್ಳಿ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತಂತ್ರಾಂಶ ಅಭಿವೃದ್ಧಿ ಹಾಗೂ ಅನುμÁ್ಠನದಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ನವದೆಹಲಿಯ ಹೊಟೇಲ್ ಇರೋಸ್ ಸಭಾಂಗಣದಲ್ಲಿ ಮೇ 29ರಂದು ಆಯೋಜಿಸಲಾಗಿದ್ದ “11th INDIA PSU IT FORUM & AWARDS 2026” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಗೆ ‘Excellence in Cloud Adoption’ ವಿಭಾಗದಡಿಯಲ್ಲಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯ ಪರವಾಗಿ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗದಗ ವಿಭಾಗೀಯ ಸಂಚಾರ ಅಧಿಕಾರಿಗಳಾದ ಪಡಿಯಪ್ಪ ಮೇತ್ರಿ ಅವರು, ‘Governance Now’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೈಲಾಶ ಅಧಿಕಾರಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಷ್ಟ್ರಮಟ್ಟದಲ್ಲಿ ತಂತ್ರಾಂಶ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಗಮನಾರ್ಹ ಹಾಗೂ ನವೀನ ಸಾಧನೆ ತೋರುವ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಗುರುತಿಸಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಥೆಗೆ ಸಂದ ಈ ರಾಷ್ಟ್ರೀಯ ಗೌರವಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಭರಮಗೌಡ (ರಾಜು) ಅ ಕಾಗೆ, ಉಪಾಧ್ಯಕ್ಷರಾದ ಸುನೀಲ್ ಹಣಮನ್ನವರ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸಂಸ್ಥೆಯು ಈ ಉನ್ನತ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಹಗಲಿರುಳು ಶ್ರಮಿಸಿದ ತಾಂತ್ರಿಕ ವಿಭಾಗದ ಅಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿ ವರ್ಗಕ್ಕೆ ಮಂಡಳಿಯ ವತಿಯಿಂದ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಸಂಸ್ಥೆಯ ಈ ಡಿಜಿಟಲ್ ಹೆಜ್ಜೆಯು ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
