ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಎಸಿಐ (ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್) ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಸುರಕ್ಷತಾ ಮಾನ್ಯತಾ ಪ್ರಶಸ್ತಿ 2026ರಲ್ಲಿ ಅತ್ಯುನ್ನತ ಗೌರವವಾದ ‘ಡೈಮಂಡ್ ಅವಾರ್ಡ್’ ಅನ್ನು ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿ ಸುರಕ್ಷಿತ ಹಾಗೂ ಸ್ಥೈರ್ಯಯುತ ವಿಮಾನ ನಿಲ್ದಾಣ ಕಾರ್ಯಾಚರಣೆಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ನಾಯಕತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ.
ಎಸಿಐ ಸುರಕ್ಷತಾ ಮಾನ್ಯತಾ ಪ್ರಶಸ್ತಿ, ಸುರಕ್ಷತಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಪರಿಣಾಮಕಾರಿ, ಪ್ರಾಯೋಗಿಕ ಮತ್ತು ನವೀನ ಪರಿಹಾರಗಳ ಮೂಲಕ ಸುರಕ್ಷತಾ ನಿರ್ವಹಣೆಯನ್ನು ಬಲಪಡಿಸುವ ವಿಮಾನ ನಿಲ್ದಾಣ ನಿರ್ವಾಹಕರಿಗೆ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿ ‘ಡೈಮಂಡ್ ಅವಾರ್ಡ್’ ಅತ್ಯುನ್ನತ ಗೌರವವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ರನ್‌ವೇ ಸುರಕ್ಷತೆಯ ಮೇಲಿನ ನಿರಂತರ ಗಮನ ಮತ್ತು ವಿಮಾನ ನಿಲ್ದಾಣ ಪರಿಸರದ ವಿವಿಧ ಪಾಲುದಾರರ ಸಹಯೋಗದೊಂದಿಗೆ ಜಾರಿಗೊಂಡಿರುವ ದತ್ತಾಂಶ ಆಧಾರಿತ ಕಾರ್ಯಾಚರಣಾ ಮಾದರಿಗೆ ಈ ಪ್ರಶಸ್ತಿ ಲಭಿಸಿದೆ.
ರನ್‌ವೇ ಸೇಫ್ಟಿ ಟೀಮ್ (ಆರ್‌ಎಸ್‌ಟಿ) ನೇತೃತ್ವದಲ್ಲಿ ರೂಪಿಸಲಾದ ಸ್ವದೇಶಿ ‘ರನ್‌ವೇ ಸೇಫ್ಟಿ ಮೆಚ್ಯುರಿಟಿ ಮ್ಯಾಟ್ರಿಕ್ಸ್’, ಅಪಾಯದ ಸ್ಥಳಗಳ ನಿರ್ವಹಣಾ ಕ್ರಮಗಳು, ಪೈಲಟ್ ಜಾಗೃತಿ ಕಾರ್ಯಕ್ರಮಗಳು, ಸುಧಾರಿತ ಫಾರಿನ್ ಆಬ್ಜೆಕ್ಟ್ ಡೆಬ್ರಿಸ್ (ಎಫ್‌ಒಡಿ) ನಿರ್ವಹಣಾ ಪದ್ಧತಿ ಹಾಗೂ ಏರ್‌ಸೈಡ್ ಸುರಕ್ಷತೆ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸುವ ನಿರಂತರ ಕ್ರಮಗಳು ಈ ಸಾಧನೆಗೆ ಪ್ರಮುಖ ಕಾರಣಗಳಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್, ವಿಮಾನಯಾನ ವ್ಯವಸ್ಥೆಯು ದಿನದಿಂದ ದಿನಕ್ಕೆ ಹೆಚ್ಚು ಸಂಕೀರ್ಣ ಮತ್ತು ಪರಸ್ಪರ ಸಂಪರ್ಕಿತವಾಗುತ್ತಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯನ್ನು ಕೇವಲ ಪ್ರತ್ಯೇಕ ಕಾರ್ಯಾಚರಣಾ ವಿಭಾಗವಾಗಿ ನೋಡಲು ಸಾಧ್ಯವಿಲ್ಲ. ಅದು ವಿಮಾನ ನಿಲ್ದಾಣದ ಸಂಪೂರ್ಣ ವ್ಯವಸ್ಥೆಯ ದೈನಂದಿನ ಕಾರ್ಯಾಚರಣೆಯ ಭಾಗವಾಗಿರಬೇಕು.
ಈ ಮಾನ್ಯತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತಾ ಚೌಕಟ್ಟಿನ ಪರಿಪಕ್ವತೆಯನ್ನು ಹಾಗೂ ಜಾಗತಿಕ ಮಾನದಂಡಗಳಿಗೆ ಅನುಗುಣವಾದ, ಭವಿಷ್ಯೋನ್ಮುಖ ಮತ್ತು ಸ್ಥೈರ್ಯಯುತ ಕಾರ್ಯಾಚರಣೆಗಳನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಕಾರ್ಯಾಚರಣಾ ವಿಶ್ವಾಸಾರ್ಹತೆ, ಪ್ರಯಾಣಿಕರ ವಿಶ್ವಾಸ ಹಾಗೂ ದೀರ್ಘಕಾಲೀನ ವಿಮಾನಯಾನ ಸ್ಥೈರ್ಯವನ್ನು ಬಲಪಡಿಸಲು ವಿವಿಧ ಪಾಲುದಾರರ ನಡುವಿನ ಸಹಯೋಗದ ಮಹತ್ವವನ್ನೂ ಇದು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.
ಪ್ರಶಸ್ತಿ ಕುರಿತು ಮಾತನಾಡಿದ ಎಸಿಐ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದ ಮಹಾನಿರ್ದೇಶಕ ಸ್ಟೆಫಾನೊ ಬರೋನ್ಸಿ, ವಿಮಾನಯಾನ ಸುರಕ್ಷತೆ ಮತ್ತು ಕಾರ್ಯಾಚರಣಾ ದಕ್ಷತೆ ನಮ್ಮ ಉದ್ಯಮದ ಮೂಲಾಧಾರಗಳಾಗಿವೆ. ಹೆಚ್ಚುತ್ತಿರುವ ಸಂಕೀರ್ಣ ಕಾರ್ಯಾಚರಣಾ ಪರಿಸರದಲ್ಲಿ ಪ್ರಯಾಣಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಸುರಕ್ಷಿತ ಕಾರ್ಯಾಚರಣೆ ಮತ್ತು ರನ್‌ವೇ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ಈ ಪ್ರದೇಶದ ವಿಮಾನ ನಿಲ್ದಾಣವು ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವಲ್ಲಿ ಅತ್ಯುತ್ತಮ ನಾಯಕತ್ವ ಮತ್ತು ಸ್ಥೈರ್ಯವನ್ನು ಪ್ರದರ್ಶಿಸಿವೆ. ಸುರಕ್ಷತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಬದ್ಧರಾಗಿರುವ ಎಲ್ಲಾ ವಿಜೇತರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಸುರಕ್ಷತಾ ವ್ಯವಸ್ಥೆ, ಕಾರ್ಯಾಚರಣಾ ಸನ್ನದ್ಧತೆ, ಕೌಶಲ್ಯ ಅಭಿವೃದ್ಧಿ ಹಾಗೂ ವಿವಿಧ ಪಾಲುದಾರರ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಈ ಪ್ರಶಸ್ತಿ ಲಭಿಸಿರುವುದು, ಸುರಕ್ಷತೆ ಮತ್ತು ಕಾರ್ಯಾಚರಣಾ ಶ್ರೇಷ್ಠತೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧವಾಗಿರುವ ಭಾರತದ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿದೆ.
