ಸಮಗ್ರ ಸುದ್ದಿ

ಕ್ಯಾನ್ಸರ್ ಮುಕ್ತ ಸಮಾಜಕ್ಕಾಗಿ ʼಕ್ಯಾನ್ಸರ್ ಸರ್ವೈವರ್ ರನ್ʼ ಜಾಗೃತಿ ಓಟ

Share

ಬೆಂಗಳೂರು: ಮಾರಕ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮತ್ತು ಕ್ಯಾನ್ಸರ್ ಗೆದ್ದವರನ್ನು ಬೆಂಬಲಿಸಲು ʼಕ್ಯಾನ್ಸರ್ ಸರ್ವೈವರ್ ರನ್ʼ ಶೀರ್ಷಿಕೆಯಡಿ ಭಾನುವಾರ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಬೃಹತ್ ಮ್ಯಾರಾಥಾನ್‌ ನಡೆಯಿತು.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಜಮಾಯಿಸಿದರು. ನಂತರ ಕಸ್ತೂರಬಾ ರಸ್ತೆ, ಕಬ್ಬನ್‌ರಸ್ತೆ, ಜಿಪಿಒ, ಹೈಕೋರ್ಟ್, ಯುಬಿ ಸಿಟಿ ಮಾರ್ಗಗಳಾದಿಯಾಗಿ ಓಟ ಸಾಗಿತು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ 2 ಕೆ, 5 ಕೆ ಹಾಗೂ 10ಕೆ ದೂರದ ಓಟದ ಸ್ಪರ್ಧೆಗಳನ್ನು ಆಯೋಜಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಓಟ ಆರೋಗ್ಯಕ್ಕೆ ಅನುಕೂಲಕರವಾದ್ದರಿಂದ ಹೆಚ್ಚಿನ ಮಂದಿ ಉತ್ಸಾಹದಿಂದ ತಂಡೋಪತಂಡವಾಗಿ ಆಗಮಿಸಿದ್ದರು. ರಜೆ ಇದ್ದುದರಿಂದ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೂ ಜತೆಗೂಡಿದ್ದರು. ಓಟದ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಸ್ಥೆಯು ಆಯೋಜಿಸಿದ್ದ ಮ್ಯಾರಾಥಾನ್‌ಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ‌ಪಾಟೀಲ್‌ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ಕ್ಯಾನ್ಸರ್‌ ನಿಯಂತ್ರಣಕ್ಕೆ ತರಲು ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜನತೆಯಲ್ಲಿ ಕ್ಯಾನ್ಸರ್‌ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಆರೋಗ್ಯಕರ ಜೀವನ ಶೈಲಿ ಪ್ರೋತ್ಸಾಹಿಸಲು ಮ್ಯಾರಾಥಾನ್‌ಗಳು ನೆರವಾಗಲಿದೆ. ಇಂತಹ ಬೃಹತ್‌ ಜಾಗೃತಿ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯಲಿದೆ. ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಆರೋಗ್ಯವಾಗಿರಬಹುದು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ನಿಂದ ಗೆದ್ದವರು ಸ್ಪೂರ್ತಿ ತುಂಬುವ ಮಾತುಗಳನ್ನಾಡಿದರು. ಕ್ಯಾನ್ಸರ್‌ ಪತ್ತೆಯಿಂದ ಚಿಕಿತ್ಸೆಯ ತನಕ ತಮಗಾದ ಅನುಭವಗಳನ್ನು ಸಾರ್ವಜನಿಕರೊಂದಿಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡರು. ಕ್ಯಾನ್ಸರ್‌ಭಯಬೇಡ, ಶೀಘ್ರ ಚಿಕಿತ್ಸೆಗೆ ಒಳಪಟ್ಟರೆ ಕ್ಯಾನ್ಸರ್‌ಗೆಲ್ಲಬಹುದು ಎಂಬ ಸಂದೇಶವನ್ನು ರವಾನಿಸಿದರು. ಕ್ಯಾನ್ಸರ್‌ನಿಂದ ಗೆದ್ದವರನ್ನು ಅಭಿನಂದಿಸಲಾಯಿತು.

ಶಾಸಕ ಡಾ. ರಂಗನಾಥ್, ಸಂಸ್ಥೆ ನಿರ್ದೇಶಕರಾದ ಡಾ.ಟಿ.ನವೀನ್‌, ವೈದ್ಯರಾದ ಡಾ.ಕೆ.ಶೋಭಾ ಸೇರಿದಂತೆ ಮತ್ತಿತರಿದ್ದರು ಉಪಸ್ಥಿತರಿದ್ದರು.


Share

You cannot copy content of this page