ಸಮಗ್ರ ಸುದ್ದಿ

ಕೋಲಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವ್ಯ ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರದ ಹಸಿರು ನಿಶಾನೆ: ಜ್ಞಾನ ಮತ್ತು ಸಂಪನ್ಮೂಲ ಕೇಂದ್ರವಾಗಿ ರೂಪುಗೊಳ್ಳಲಿರುವ ಅಧ್ಯಯನ ಕೇಂದ್ರ

Share

ಕೋಲಾರ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಭವ್ಯವಾದ ಮ್ಯೂಸಿಯಂ (ವಸ್ತುಸಂಗ್ರಹಾಲಯ) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಪೂರ್ವಾನುಮೋದನೆ ನೀಡಿದೆ.

ಕೋಲಾರದಲ್ಲಿ ಇಂತಹದೊಂದು ಬೃಹತ್ ಜ್ಞಾನಕೇಂದ್ರ ತಲೆಎತ್ತಬೇಕು ಎಂಬ ಜಿಲ್ಲಾಧಿಕಾರಿಗಳ ವಿಶೇಷ ಆಶಯದಂತೆ ಈ ಯೋಜನೆ ಸಾಕಾರಗೊಳ್ಳುತ್ತಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಈಕಂಬಳ್ಳಿ ಗ್ರಾಮದ ಸರ್ವೆ ನಂಬರ್ 19ರಲ್ಲಿರುವ 5-00 ಎಕರೆ ವಿಸ್ತೀರ್ಣದ ಸರ್ಕಾರಿ ಗುಂಡು ತೋಪು ಜಮೀನನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಮ್ಯೂಸಿಯಂ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ. ಈ ಮಹತ್ವದ ಯೋಜನೆಗಾಗಿ ಜಮೀನನ್ನು ಕೋಲಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಹೆಸರಿಗೆ ಕಾಯ್ದಿರಿಸಲು ಕಂದಾಯ ಇಲಾಖೆಯು ಜಿಲ್ಲಾಧಿಕಾರಿಯವರಿಗೆ ಅನುಮೋದನೆ ನೀಡಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ದೂರದೃಷ್ಟಿಯಂತೆ ನಿರ್ಮಾಣವಾಗುತ್ತಿರುವ ಈ ಮ್ಯೂಸಿಯಂ ಕೇವಲ ಒಂದು ಭೌತಿಕ ಸ್ಮಾರಕವಾಗಿರದೆ, ಸಮಾಜಕ್ಕೆ ಬೆಳಕು ನೀಡುವ ಚೈತನ್ಯಶೀಲ ಅಧ್ಯಯನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ಜನಪ್ರಿಯಗೊಳಿಸಲು ಮತ್ತು ಅಧ್ಯಯನ ಆಸಕ್ತರಿಗೆ ಸಂಪನ್ಮೂಲ ಒದಗಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.

ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಅವರ ಕಾಲಘಟ್ಟದ ಕುರಿತಾದ ನಿಖರ ದಾಖಲೀಕರಣ ಕಾರ್ಯವನ್ನು ಪ್ರೋತ್ಸಾಹಿಸುತ್ತದೆ.

ಅಂಬೇಡ್ಕರ್ ಅವರ ಆಳವಾದ ತತ್ವಶಾಸ್ತ್ರವನ್ನು ಸಮಕಾಲೀನ ಸನ್ನಿವೇಶದಲ್ಲಿ ಅಧ್ಯಯನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಇದೊಂದು ವೇದಿಕೆಯಾಗಲಿದೆ.

ಶಿಕ್ಷಣ ತಜ್ಞರು, ನಾಯಕರು, ಸಮಾಜಮುಖಿ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು, ಆರ್ಥಿಕ ತಜ್ಞರು ಮತ್ತು ವಿದ್ಯಾರ್ಥಿಗಳು ಹಾಗೂ ಸಮಾಜದ ವಂಚಿತ ವರ್ಗಗಳ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿರುವ ವಿವಿಧ ಗುಂಪುಗಳ ನಡುವೆ ದೃಢವಾದ ಸಂಪರ್ಕವನ್ನು ಸ್ಥಾಪಿಸಲು ಈ ಕೇಂದ್ರವು ಪ್ರಮುಖ ಸಂಪರ್ಕ ಮತ್ತು ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಒಟ್ಟಾರೆಯಾಗಿ, ಮಾನ್ಯ ಜಿಲ್ಲಾಧಿಕಾರಿಗಳ ಸಕಾರಾತ್ಮಕ ಹೆಜ್ಜೆ ಹಾಗೂ ರಾಜ್ಯ ಸರ್ಕಾರದ ತ್ವರಿತ ಸ್ಪಂದನೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿಯ ನೂತನ ಶಕ್ತಿ ಕೇಂದ್ರವೊಂದು ತಲೆಎತ್ತುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅಪಾರ ಹರ್ಷ ವ್ಯಕ್ತವಾಗಿದೆ.


Share

You cannot copy content of this page