ಸಮಗ್ರ ಸುದ್ದಿ

ಕಡಿಮೆ ವೆಚ್ಚದಲ್ಲಿ ರಾಜ್ಯದ ವಿದ್ಯುತ್ ಪ್ರಸರಣ ಸಾಮರ್ಥ್ಯ ಶೇ. 25 ರಷ್ಟು ಹೆಚ್ಚಳದ ಗುರಿ – ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ

Share

ಬೆಂಗಳೂರು:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶೂನ್ಯ ವೆಚ್ಚದಲ್ಲಿ ರಾಜ್ಯದ ವಿದ್ಯುತ್‌ ಪ್ರಸರಣ ಸಾಮರ್ಥ್ಯವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ. ಬೆಂಗಳೂರು ನಗರದ ಪುಟ್ಟೇನಹಳ್ಳಿ – ಸಹಕಾರನಗರ 220 ಕೆವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ‘ಡೈನಾಮಿಕ್ ಲೈನ್ ರೇಟಿಂಗ್’ (ಡಿಎಲ್‌ಆರ್) ಪ್ರಾಯೋಗಿಕ ಯೋಜನೆ ಆಳವಡಿಕೆಯನ್ನು ಆರಂಭಿಸಿದೆ.

ಈ ಯೋಜನೆಯ ಅನುಷ್ಠಾನಕ್ಕೆ ಕಾರ್ಯಾದೇಶ ಪತ್ರವನ್ನು (LoI) ನೀಡಲಾಗಿದೆ. ಈ ಮೂಲಕ ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ರಾಜ್ಯ ವಿದ್ಯುತ್ ಪ್ರಸರಣ ನಿಗಮವಾಗಿ ಹೊರ ಹೊಮ್ಮಿದೆ.

ಈ ಹೊಸ ತಂತ್ರಜ್ಞಾನದ ಮೂಲಕ, ಯಾವುದೇ ಹೆಚ್ಚುವರಿ ಟವರ್‌ಗಳ ನಿರ್ಮಾಣ ಅಥವಾ ಹೊಸ ಭೂ ಸ್ವಾಧೀನದ ಅಗತ್ಯವಿಲ್ಲದೆ, ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಶೇಕಡಾ 25 ರಷ್ಟು ಹೆಚ್ಚಿಸುವ ಗುರಿಯನ್ನು ನಿಗಮ ಹೊಂದಿದೆ.

ಈ ಯೋಜನೆಯು ಪ್ರಸ್ತುತ ಜಾರಿಯಲ್ಲಿರುವ ಸಾಂಪ್ರದಾಯಿಕ ‘ಸ್ಟಾಟಿಕ್ ಲೈನ್ ರೇಟಿಂಗ್’ ವಿಧಾನದ ಬದಲಿಗೆ, ಐಒಟಿ (IoT) ಸಂವೇದಕಗಳನ್ನು ಬಳಸುತ್ತದೆ. ಈ ಸಂವೇದಕಗಳು ತಾಪಮಾನ, ಗಾಳಿಯ ವೇಗ, ಸೌರ ವಿಕಿರಣ ಮತ್ತು ವಿದ್ಯುತ್ ತಂತಿಯ ಸ್ಥಿತಿಗತಿಯನ್ನು (Conductor Sag) ನೈಜ ಸಮಯದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ. ಈ ದತ್ತಾಂಶವು, ಹವಾಮಾನ ಪರಿಸ್ಥಿತಿಗನುಗುಣವಾಗಿ ವಿದ್ಯುತ್ ಹರಿವನ್ನು ಹೆಚ್ಚಿಸಲು ಗ್ರಿಡ್ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ರಾಜ್ಯದಲ್ಲಿನ ನಗರೀಕರಣ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳ, ಡೇಟಾ ಸೆಂಟರ್‌ಗಳು ಮತ್ತು ಎಐ-ಚಾಲಿತ ಕೈಗಾರಿಕೆಗಳಿಂದ ವಿದ್ಯುತ್ ಬೇಡಿಕೆ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಿದೆ.

ಪುಟ್ಟೇನಹಳ್ಳಿ-ಸಹಕಾರನಗರ 220 KV ಲೈನ್‌ ಅನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಇಲ್ಲಿನ ಫಲಿತಾಂಶಗಳ ಆಧಾರದ ಮೇಲೆ ಕೆಪಿಟಿಸಿಎಲ್ ರಾಜ್ಯದ ಇತರ ಹೆಚ್ಚಿನ ಬೇಡಿಕೆ ಮತ್ತು ನವೀಕರಿಸಬಹುದಾದ ಇಂಧನ ಮಾರ್ಗಗಳಿಗೆ ಈ ತಂತ್ರಜ್ಞಾನವನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

ಈ ಯೋಜನೆಯು ಕೆಪಿಟಿಸಿಎಲ್ ನ ದೀರ್ಘಕಾಲೀನ ಗ್ರಿಡ್ ಆಧುನೀಕರಣದ ಕಾರ್ಯತಂತ್ರದ ಭಾಗವಾಗಿದ್ದು, ಕರ್ನಾಟಕವನ್ನು ಸದೃಢ, ಡಿಜಿಟಲ್ ಸಿದ್ದ ಮತ್ತು ಸುಸ್ಥಿರ ವಿದ್ಯುತ್ ಜಾಲವನ್ನು ಹೊಂದಿರುವ ರಾಜ್ಯವನ್ನಾಗಿ ಮಾಡುವ ದೃಷ್ಟಿಯೊಂದಿಗೆ ರೂಪಿಸಲಾಗಿದೆ.

ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು,
“ಕರ್ನಾಟಕವು ವಿದ್ಯುತ್ ವಲಯದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಪುಟ್ಟೇನಹಳ್ಳಿ-ಸಹಕಾರನಗರ ಕಾರಿಡಾರ್‌ನಲ್ಲಿ ಅಳವಡಿಸಲಾಗುತ್ತಿರುವ ಈ ಡೈನಾಮಿಕ್ ಲೈನ್ ರೇಟಿಂಗ್ ಯೋಜನೆಯು, ಲಭ್ಯವಿರುವ ಮೂಲಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯುತ್ ಜಾಲದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಹೆಚ್ಚಿನ ಬಂಡವಾಳ ಹೂಡಿಕೆಯಿಲ್ಲದೆ ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ಇದು ಸಹಕಾರಿಯಾಗಲಿದೆ. ಈ ತಂತ್ರಜ್ಞಾನ ಅಳವಡಿಕೆ, ರಾಜ್ಯದಲ್ಲಿ ಭವಿಷ್ಯಕ್ಕೆ ಸಜ್ಜಾದ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸಲು ನಮಗೆ ಅನುವು ಮಾಡಿಕೊಡಲಿದೆ”.

ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು, “ಡೈನಾಮಿಕ್ ಲೈನ್ ರೇಟಿಂಗ್ ವ್ಯವಸ್ಥೆಯಿಂದಾಗಿ, ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಸರಣ ಜಾಲದ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ರಾಜ್ಯದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಮಗೆ ನೆರವಾಗಲಿದೆ”.

Explainer:
ಸ್ಟಾಟಿಕ್ ಲೈನ್ ರೇಟಿಂಗ್ : ಈ ವಿಧಾನದಲ್ಲಿ ವಿದ್ಯುತ್‌ ತಂತಿಗಳು ಎಷ್ಟು ವಿದ್ಯುತ್‌ ಸಾಗಿಸಬಲ್ಲವು ಎಂದು ಲೆಕ್ಕ ಹಾಕುವಾಗ, ಇಂಜಿನೀಯರ್‌ಗಳು ʼಅತಿ ಹೆಚ್ಚು ಬಿಸಿಲು ಅಥವಾ ಗಾಳಿಯೇ ಇಲ್ಲದ ಪರಿಸ್ಥಿತಿಯನ್ನು ಮಾನದಂಡವಾಗಿಟ್ಟುಕೊಂಡಿರುತ್ತಾರೆ. ಇದು ಸುರಕ್ಷಿತ ವಿಧಾನ. ಆದರೆ, ಪರಿಸ್ಥಿತಿ ಮತ್ತು ಹವಾಮಾನ ಉತ್ತಮವಾಗಿದ್ದೂ, ವಿದ್ಯುತ್‌ ತಂತಿಗಳು ಹೆಚ್ಚಿನ ವಿದ್ಯುತ್‌ ಸಾಗಿಸುವ ಸಾಮರ್ಥ್ಯ ಹೊಂದಿದ್ದರೂ ನಾವು ಹಾಕಿಕೊಂಡಿರುವ ಮಿತಿಗಳಿಂದ ಹೆಚ್ಚಿನ ವಿದ್ಯುತ್‌ ಸಾಗಿಸಲು ಸಾಧ್ಯವಾಗುವುದಿಲ್ಲ. ರಸ್ತೆ ಉತ್ತಮವಾಗಿದ್ದರೂ ವೇಗದ ಮಿತಿ ಹೇರಿಕೆಯಿಂದ ವಾಹನ ಸಂಚಾರ ನಿಯಂತ್ರಣದಂತೆ ಇದಾಗಿದೆ. ಇದರಿಂದ ಗ್ರಿಡ್‌ನ ದೊಡ್ಡ ಪ್ರಮಾಣದ ಸಾಮರ್ಥ್ಯ ಸುಮ್ಮನೆ ವ್ಯರ್ಥವಾಗುತ್ತದೆ.

‘ಡೈನಾಮಿಕ್ ಲೈನ್ ರೇಟಿಂಗ್’ (DLR) ತಂತ್ರಜ್ಞಾನ ಇದಕ್ಕೆ ತದ್ವಿರುದ್ಧ. ಇದು ವಾಸ್ತವಿಕ ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಜಾಣ ತಂತ್ರಜ್ಞಾನ. ತಂತಿಗಳ ಮೇಲೆ ಅಳವಡಿಸುವ ಸ್ಮಾರ್ಟ್ ಸೆನ್ಸಾರ್‌ಗಳು ಗಾಳಿಯ ವೇಗ, ತಾಪಮಾನ ಮುಂತಾದವನ್ನು ಕ್ಷಣಕ್ಷಣಕ್ಕೂ ಗಮನಿಸುತ್ತವೆ. ಗಾಳಿ ಬೀಸುತ್ತಿದ್ದರೆ ತಂತಿಗಳು ತಂಪಾಗಿರುತ್ತವೆ, ಅಂತಹ ಸಮಯದಲ್ಲಿ ಆ ತಂತಿಗಳು ಹೆಚ್ಚು ವಿದ್ಯುತ್ ಸಾಗಿಸಲು ಸಿದ್ಧವಿರುತ್ತವೆ. ಈ ತಂತ್ರಜ್ಞಾನ ಆ ಪರಿಸ್ಥಿತಿಯನ್ನು ಗ್ರಹಿಸಿ, ವ್ಯರ್ಥವಾಗುತ್ತಿದ್ದ ಶೇ. 25ರಷ್ಟು ಹೆಚ್ಚುವರಿ ಸಾಮರ್ಥ್ಯವನ್ನು ಸುರಕ್ಷಿತವಾಗಿ ಬಳಸಿಕೊಳ್ಳಲು ನಮಗೆ ದಾರಿ ಮಾಡಿಕೊಡುತ್ತದೆ. ಹೊಸ ಟವರ್‌ಗಳನ್ನು ಕಟ್ಟುವ ಭಾರಿ ಖರ್ಚಿಲ್ಲದೆ, ಇದ್ದಿದ್ದರಲ್ಲೇ ಹೆಚ್ಚು ವಿದ್ಯುತ್ ಪಡೆಯುವ ಜಾಣ್ಮೆ ಇದಾಗಿದೆ.


Share

You cannot copy content of this page