ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯವು 2026ನೇ ಸಾಲಿನ ಇಲಾಖಾ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ನೇಮಿಸಿ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ.
ವರ್ಗಾವಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೂರ್ಣಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತಾಲಯದ ಆದೇಶ ತಿಳಿಸಿದೆ.
30 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ
ಇಲಾಖೆಯ ಆದೇಶದ ಪ್ರಕಾರ, ಪ್ರಸಕ್ತ ಸಾಲಿನ ವರ್ಗಾವಣೆಯಿಂದ ಬಾಧಿತರಾದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ಆದೇಶ ಸ್ವೀಕರಿಸಿದ ಮೂವತ್ತು (30) ದಿನಗಳೊಳಗಾಗಿ ಬಾಧಿತ ಸಿಬ್ಬಂದಿಗಳು ಮೇಲ್ಮನವಿ ಸಲ್ಲಿಸಬಹುದಾಗಿದೆ.
ಸಮನ್ವಯಕ್ಕೆ ವಿವಿಧ ವೃಂದದ ಅಧಿಕಾರಿಗಳ ನೇಮಕ
ಬಂದಂತಹ ಮೇಲ್ಮನವಿಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಲು ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಹುದ್ದೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಮನ್ವಯ ಜವಾಬ್ದಾರಿಗಳಿಗಾಗಿ ನಿಯೋಜಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಉಪ ನಿರ್ದೇಶಕರುಗಳಾದ ಡಾ. ರಘುನಂದನ್ (NCD), ಡಾ. ವೀರಭದ್ರಯ್ಯ (PHI), ಡಾ. ಸುರೇಶ್ ಶಾಸ್ತ್ರಿ (ABARK), ಡಾ. ಚಂದ್ರಿಕಾ (FW), ಡಾ. ಸಂಗೀತಾ (SIHFW), ಡಾ. ವಿವೇಕ ದೊರೆ (ವೈದ್ಯಕೀಯ-1), ಡಾ. ಪ್ರಭುದೇವ ಗೌಡ (EMRI), ಡಾ. ರಮೇಶ್ (PHI), ಡಾ. ಪದ್ಮ (SSU), ಡಾ. ರಾಧಾಕೃಷ್ಣ (DJD ಬೆಂಗಳೂರು), ಡಾ. ನಾಗಮೂರ್ತಿ (DJD) ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇವರೊಂದಿಗೆ ಕಛೇರಿ ಅಧೀಕ್ಷಕರು, ಗಣಕಯಂತ್ರ ಸಹಾಯಕರು, ಶುಶೂಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ವಾಹನ ಚಾಲಕರು ಹಾಗೂ ಫಾರ್ಮಸಿ ಅಧಿಕಾರಿಗಳು ಸಮನ್ವಯ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ.
ನೋಡಲ್ ಅಧಿಕಾರಿಗಳ ಹೆಗಲಿಗೆ ಪ್ರಮುಖ ಹೊಣೆ
ಬಂದಿರುವ ಮೇಲ್ಮನವಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸುವ ಮಹತ್ವದ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ. ಹಿರಿಯ ಅಧಿಕಾರಿಗಳಾದ ಶ್ರೀನಿವಾಸ ಎಸ್.ಎಂ., ಡಾ. ಸೌಜನ್ಯ, ಗೀತಾ ಹುಡೇದ ಹಾಗೂ ವೆಂಕಟರಾಜು ಮುಂತಾದವರು ತಮ್ಮ ತಮ್ಮ ವೃಂದಗಳಿಗೆ ನಿಯೋಜಿಸಲಾದ ಮೇಲ್ಮನವಿಗಳನ್ನು ಪರಿಶೀಲಿಸುವ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಯುಕ್ತರು ನೀಡಿರುವ ಕಟ್ಟುನಿಟ್ಟಿನ ಸೂಚನೆಯಂತೆ, ನೇಮಕಗೊಂಡಿರುವ ಅಧಿಕಾರಿಗಳ ತಂಡವು ತಮಗೆ ವಹಿಸಲಾದ ವ್ಯಾಪ್ತಿಯ ಮೇಲ್ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಷರಾಗಳೊಂದಿಗೆ (ಅಭಿಪ್ರಾಯ) ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಈ ಮೂಲಕ ವರ್ಗಾವಣೆ ಪ್ರಕ್ರಿಯೆಯ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಯಿದೆ.
