ಬೆಂಗಳೂರು :ಭಾರತ ಸರ್ವೋಚ್ಛ ನ್ಯಾಯಾಲಯ ಆಗಸ್ಟ್ 21 ರಿಂದ 23 ರ ವರೆಗೆ ಹಮ್ಮಿಕೊಳ್ಳಲಾಗಿರುವ “ಸಮಾಧಾನ ಸಮರೋಹ” ವಿಶೇಷ ಲೋಕ್ ಅದಾಲತ್ ನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಅವಕಾಶವಾಗಿದ್ದು ಪ್ರತಿಯೊಂದು ಇಲಾಖೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಮುಖಾ-ಮುಖಿಯಾಗಿ ಬಗೆಹರಿಸಿಕೊಳ್ಳಲು ಮುಂದಾಗಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸೂಚಿಸಿದರು.
ಭಾರತ ಸರ್ವೋಚ್ಛ ನ್ಯಾಯಾಲಯದ “ಸಮಾಧಾನ ಸಮರೋಹ” ವಿಶೇಷ ಲೋಕ್ ಅದಾಲತ್ ಕುರಿತಂತೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಲೋಕ್ ಅದಾಲತ್ ನಲ್ಲಿ ಸರ್ಕಾರಕ್ಕೆ ಆಗುವ ಪ್ರಯೋಜನಗಳ ಕುರಿತು ಇಲಾಖಾ ಮಟ್ಟದಲ್ಲಿ ಕೂಲಂಕುಷವಾಗಿ ಚರ್ಚಿಸಿ ಬಹಳ ವರ್ಷಗಳಿಂದ ಬಗೆಹರಿಯದ ಪ್ರಕರಣಗಳಿಗೆ ಮುಕ್ತಿ ನೀಡಬೇಕು ಎಂದರು.
ಸರ್ಕಾರದ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವ ಸಾರ್ವಜನಿಕರಿಗೆ ಲೋಕ ಅದಾಲತ್ ನಿಂದಾಗುವ ಪ್ರಯೋಜನೆಗಳ ಕುರಿತು ಅರಿವು ಮೂಡಿಸಬೇಕು, ಎರಡೂ ಕಡೆಯ ವಕೀಲರ ಮುಖಾಂತರ ಪ್ರಾಥಮಿಕವಾಗಿ ಸಭೆ ನಡೆಸಿ ಪ್ರಕರಣ ಬಗೆ ಹರಿಯುವುದರಿಂದಾಗುವ ಲಾಭಗಳ ಕುರಿತು ಜಾಗೃತಿ ಮೂಡಿಸಿ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ಇಲಾಖಾವಾರು ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ಬಗೆ ಹರಿಯದೇ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿಗಳು ಪ್ರತಿ ಪ್ರಕರಣವನ್ನು ಸುಖಾಂತಗೊಳಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಪ್ರತಿ ಇಲಾಖೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಭಾರತ ಸರ್ವೋಚ್ಛ ನ್ಯಾಯಾಲಯ ಸಹ ಈಗಾಗಲೇ ಬಗೆಹರಿಸಬಹುದಾದ ಪ್ರಕರಣಗಳನ್ನು ಪಟ್ಟಿ ಮಾಡಿದ್ದು, ಪಟ್ಟಿ ಮಾಡಲಾದ ವಿಷಯಗಳ ಬಿಟ್ಟು ಉಳಿದ ಪ್ರಕರಣಗಳಿದ್ದಲ್ಲಿ ಸಹ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಸಂಬಂಧಿಸಿದ ವಕೀಲರೊಂದಿಗೆ ಚರ್ಚಿಸಲು ಸೂಚಿಸಿದರು.
ಸರ್ಕಾರದಲ್ಲಿ ಬಹುತೇಕ ಸರ್ಕಾರಿ ನೌಕರರಿಗೆ ಸೇರಿದ ಸರ್ವೀಸ್ ಮ್ಯಾಟರ್ ಹಾಗೂ ಭೂ ಪರಿಹಾರಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಇಲಾಖಾವಾರು ಬಾಕಿ ಇರುವ ಪ್ರಕರಣಗಳ ಪರಿಶೀಲನೆ ಮಾಡಿದ ಅವರು ಬಗೆಹರಿಸಿಕೊಳ್ಳಬಹುದಾದ ಪ್ರಕರಣಗಳನ್ನು ಪಟ್ಟಿ ಮಾಡಿ ಲೋಕ್ ಅದಾಲತ್ ಗೆ ನೊಂದಾಯಿಸಿಕೊಳ್ಳಲು ಸೂಚಿಸಿದರು.
ಕರ್ನಾಟಕ ಸರ್ಕಾರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿದ್ದು, ಅವುಗಳಲ್ಲಿ ಸುಮಾರು 400 ಪ್ರಕರಣಗಳನ್ನು ಈ ವಿಶೇಷ ಲೋಕ್ ಅದಾಲತ್ ನಲ್ಲಿ ಬಗೆ ಹರಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಇಲಾಖೆಯು ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಈ ವಿಶೇಷ ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಲು ಪ್ರಾಥಮಿಕವಾಗಿ ಕಾನೂನು ಸೇವೆಗಳ ಪ್ರಾಧಿಕಾರ, ಸಂಬಂಧಿಸಿದ ಇಲಾಖಾ ಸಚಿವರು, ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಜೊತೆ ಸಮನ್ವಯ ನಡೆಸಿ ಅವರ ಅಭಿಪ್ರಾಯವನ್ನು ಪಡೆದು ಮುಂದುವರೆಯುವಂತೆ ಸೂಚಿಸಿದರು.
ಸಭೆಯಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್, ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಸರ್ಕಾರದ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
