ಬೆಂಗಳೂರು:ಎಲೆಕ್ಟ್ರಿಕ್ ವಾಹನ ವಲಯಕ್ಕೆ ಮತ್ತಷ್ಟು ಶಕ್ತಿ ನೀಡುವುದು, ಬಿಡಿ ಭಾಗಗಳನ್ನು ತಯಾರಿಸುವ ಪೂರಕ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದರು.
ಹೆಚ್‌ಎಂಟಿ ಭವನದಲ್ಲಿ ನಡೆದ ಇವಿ ವಲಯದ ಪೂರಕ ವ್ಯವಸ್ಥೆಗೆ ಸಂಬಂಧಿತ ಉದ್ಯಮ ಕ್ಷೇತ್ರದ ಪಾಲುದಾರರ ಜತೆ ಸಮಾಲೋಚನೆ ನಡೆಸಿದ ಸಚಿವರು; ಸುಸ್ಥಿರ ಹಸಿರು ಸಾರಿಗೆಯತ್ತ ಭಾರತವು ದಿಟ್ಟಹೆಜ್ಜೆ ಇರಿಸಿದ್ದು, ಅದರ ವ್ಯಾಪ್ತಿ ಕರ್ನಾಟಕದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಆಗಬೇಕು ಎನ್ನುವ ಉದೇಶದಿಂದ ವಿವಿಧ ಅಂಶಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಲಾಯಿತು.
ಎಲೆಕ್ಟ್ರಿಕ್ ವಾಹನ ಉದ್ಯಮ ಕ್ಷೇತ್ರವನ್ನು ಪರಿವರ್ತನ್ಮಕವಾಗಿ ಮತ್ತಷ್ಟು ಬಲಪಡಿಸುವ ಜತೆಗೆ ಜಾಗತಿಕವಾಗಿ ಸ್ಪರ್ಧಾತ್ಮಕ ದೇಶೀಯ ವಿದ್ಯುತ್ ಚಾಲಿತ ವಾಹನ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ಬಲಿಷ್ಠವಾಗಿ ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಉದ್ಯಮದ ಪ್ರಮುಖರ ಜತೆ ವಿಸ್ತೃತವಾಗಿ ಚರ್ಚಿಸಿದರು.
ಅಲ್ಲವೇ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳನ್ನು ತಯಾರಿಸುವುದು ಕೈಗಾರಿಕೆ ಸ್ಥಾಪಿಸಲು ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಕೇಂದ್ರ ಸಚಿವರು ಆಹ್ವಾನಿಸಿದರು.
ಅಲ್ಲದೆ; ಎಲೆಕ್ಟ್ರಿಕ್ ಬಸ್‌ಗಳು, ಎಲೆಕ್ಟ್ರಿಕ್ ಟ್ರಕ್‌ಗಳು ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು (BMS), ಬ್ಯಾಟರಿ ಪ್ಯಾಕ್‌ಗಳು, ಬ್ಯಾಟರಿ ಕೋಶಗಳು ಮತ್ತು ಬ್ಯಾಟರಿ ಘಟಕಗಳು, ಚಾರ್ಜಿಂಗ್ ಉಪಕರಣಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳು ಸೇರಿದಂತೆ ವಿವಿಧ ಪೂರಕ ವಿಭಾಗಗಳಲ್ಲಿ ತೊಡಗಿರುವ ತಯಾರಕರು ಮತ್ತು ಉದ್ಯಮದ ಪಾಲುದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ಇವಿ ಪೂರಕ ವಲಯ ಎದುರಿಸುತ್ತಿರುವ ಹಲವಾರು ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಇವಿ ಉದ್ಯಮ ಕ್ಷೇತ್ರವು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸಾಮೂಹಿಕ ಸಾರಿಗೆ ವ್ಯವಸ್ಥೆಯಲ್ಲಿ ಮಾಲಿನ್ಯವನ್ನು ಶೂನ್ಯ ಮುಟ್ಟಕ್ಕೆ ಇಳಿಸುವ ಗುರಿಯೊಂದಿಗೆ ಅನೇಕ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಕ್ಷೇತ್ರದ ಪೂರಕ ವಲಯದ ಸಣ್ಣ ಮಟ್ಟದ ಕೈಗಾರಿಕೆಗಳನ್ನು ವಿಸ್ತೃತವಾಗಿ ಉತ್ತೇಜಿಸಿ ಬೆಳೆಸುವ ಉದ್ದೇಶ ಕೇಂದ್ರ ಸರ್ಕಾರದ್ದು. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ಪಿಎಂ ಈ ಡ್ರೈವ್, ಉತ್ಪಾದನಾ ಆಧರಿತ ಪ್ರೋತ್ಸಾಹ ಯೋಜನೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ಬೆಳೆಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಪೂರಕಗಳಿಗೆ ಇರುವ ಅವಕಾಶಗಳ ಬಗ್ಗೆ ಸಚಿವರು ಉದ್ಯಮದ ಪಾಲುದಾರರೊಂದಿಗೆ ಚರ್ಚಿಸಿದರು. ಅಲ್ಲದೆ ಈ ಬಗ್ಗೆ ವಿಸೃತ ಮಾಹಿತಿ ಪಡೆದುಕೊಂಡರು.
