ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು, ಮಳೆ ಹಾನಿ ಹಾಗೂ ಮಳೆ-ಗಾಳಿಗೆ ಬಿದ್ದ ಮರ ತೆರವು ಸೇರಿದಂತೆ ಇನ್ನಿತರ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಲು ಅಭಿವೃದ್ಧಿಪಡಿಸಲಾದ ಬೆಂಗಳೂರು ಸಂಚಾರ ಪೊಲೀಸ್ ಬಳಸುತ್ತಿರುವ ‘ಅಸ್ತ್ರಂ’ ಆಪ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಪಾಲಿಕೆಯ ಅಭಿಯಂತರರಿಗೆ ಕಾರ್ಯಗಾರವನ್ನು ಇಂದು ಪಾಲಿಕೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಸ್ತ್ರಂ ಆ್ಯಪ್ ತಂಡದಿಂದ ಎಂಜಿನಿಯರ್‌ಗಳಿಗೆ ತರಬೇತಿ:
ಈ ತರಬೇತಿ ಕಾರ್ಯಾಗಾರದಲ್ಲಿ ‘ಅಸ್ತ್ರಂ’ ತಾಂತ್ರಿಕ ತಂಡದವರು ಆ್ಯಪ್ ಬಳಕೆ ಕುರಿತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಗುಂಡಿಗಳು, ಮಳೆ ಹಾನಿ ಹಾಗೂ ರಸ್ತೆಗೆ ಬಿದ್ದ ಮರಗಳನ್ನು ಈ ತಂತ್ರಜ್ಞಾನದ ಮೂಲಕ ಹೇಗೆ ಗುರುತಿಸಬೇಕು ಮತ್ತು ತಕ್ಷಣವೇ ಸ್ಥಳಕ್ಕೆ ತೆರಳಿ ದುರಸ್ತಿ ಹಾಗೂ ತೆರವು ಕಾರ್ಯಗಳ ಕುರಿತ ಸಂಕ್ಷಿಪ್ತ ಮಾಹಿತಿ ನೀಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು.
ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ನೇತೃತ್ವದಲ್ಲಿ ಕಾರ್ಯಗಾರ:
ಪಾಲಿಕೆಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಅವರ ನೇತೃತ್ವದಲ್ಲಿ ಈ ತರಬೇತಿ ಕಾರ್ಯಾಗಾರ ನಡೆದಿದ್ದು, ಕಾರ್ಯಗಾರದ ನಂತರ ಮಾತನಾಡಿದ ಮುಖ್ಯ ಅಭಿಯಂತರರು, “ತುರ್ತು ಸಂದರ್ಭಗಳಲ್ಲಿ ಹಾಗೂ ಸಾರ್ವಜನಿಕ ದೂರುಗಳನ್ನು ಪರಿಹರಿಸುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರ ವಹಿಸಲಿದೆ. ಎಲ್ಲಾ ಅಭಿಯಂತರರು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರು ಅಥವಾ ಸಂಚಾರ ಪೊಲೀಸರು ಈ ಆ್ಯಪ್ ಮೂಲಕ ವರದಿ ಮಾಡುವ ಸಮಸ್ಯೆಗಳ ಸ್ಥಳಗಳಿಗೆ ಪಾಲಿಕೆ ಅಭಿಯಂತರರು ಹಾಗೂ ಅವರ ತಂಡ ತಕ್ಷಣವೇ ಭೇಟಿ ನೀಡಿ, ಸಮಸ್ಯೆ ಬಗೆಹರಿಸಲು ಈ ಅಪ್ಲಿಕೇಶನ್ ಸಹಕಾರಿಯಾಗಲಿದೆ ಎಂದು ಮುಖ್ಯ ಅಭಿಯಂತರರು ತಿಳಿಸಿದರು.
