ಸಮಗ್ರ ಸುದ್ದಿ

ಬೆಳೆ ನಷ್ಟ ಅನುಭವಿಸಿದ ರೈತರಿಗೆ ನ್ಯಾಯಸಮ್ಮತ ಪರಿಹಾರ ನೀಡಲು ಆಗ್ರಹ

Share

ಬೆಂಗಳೂರು:ಮಳೆ ಬಂದು ಜಲಾಶಯಗಳು ತುಂಬುತ್ತಿವೆ ಎಂದು ಮೈಮರೆಯುವುದು ಬೇಡ. ಮೊದಲು ರೈತರಿಗೆ ನೀರು ಕೊಟ್ಟು ತುಂಬಿಸಬೇಕು. ಕೂಡಲೇ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ನ್ಯಾಯೋಚಿತ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಾವೇರಿ ಕುರಿತ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವರು; ಮಳೆ ನಮ್ಮ ರಕ್ಷಣೆಗೆ ಬಂದಿದೆ ನಿಜ. ಹಾಗಂತ ಮುಂದಿನ ದಿನಗಳಲ್ಲಿ ನಾವು ಎಚ್ಚರ ತಪ್ಪುವುದು ಬೇಡ. ಕುಡಿಯುವ ನೀರಿನ ಉದ್ದೇಶದ ಜತೆಗೆ ರೈತರಿಗೆ ನೀರು ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸದ್ಯಕ್ಕೆ ಮಳೆ ಬಂತು ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆವು ಎನ್ನುವ ವರ್ತನೆ ಬೇಡ ಎಂದರು.

ಸರ್ಕಾರ ಬಹಳ ಹಿಂದೆಯೇ ಎಚ್ಚರಿಕೆ ವಹಿಸಬೇಕಿತ್ತು. ಕುಡಿಯುವ ಉದ್ದೇಶಕ್ಕೆ ನೀರು ಬೇಕು, ಬೆಳೆಗಳಿಗಳಿಗೆ ಬಿಡುವುದಿಲ್ಲ ಎನ್ನುವ ನಿರ್ಧಾರದಿಂದ ರೈತರಿಗೆ ಬೆಳೆ ನಷ್ಟವಾಗಿದೆ. ಕಾವೇರಿ ಸೇರಿ ತುಂಗಭದ್ರಾ ವ್ಯಾಪ್ತಿಯಲ್ಲಿ ಕೂಡ ಭತ್ತ ಬೆಳೆಯಬೇಡಿ ಎಂದು ಆದೇಶ ಹೊರಡಿಸಲಾಗಿತ್ತು. ಪರಿಣಾಮವಾಗಿ ಹಾಲಿ ಇದ್ದ ಬೆಳೆ ನಾಶವಾಗಿದೆ. ಇನ್ನು ಈಗ ಮಳೆ ಬಂದರೂ ಭತ್ತದ ಒಟ್ಲು ಬಿಡದ ಕಾರಣಕ್ಕೆ ಭತ್ತ ನಾಟಿ ಮಾಡಲು ಆಗುತ್ತಿಲ್ಲ. ಸರ್ಕಾರ ಸರಿಯಾಗಿ ಅಂದಾಜು ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ತಕ್ಷಣವೇ ಸರ್ಕಾರ ರೈತರ ನೆರವಿಗೆ ಧಾವಿಸಿ ಸೂಕ್ತ, ನ್ಯಾಯಸಮ್ಮತವಾದ ಪರಿಹಾರ ಘೋಷಣರಾಡಬೇಕು ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

ಮೇಕೆದಾಟು; ದೇವೇಗೌಡರ ಸಲಹೆ ಪರಿಗಣಿಸಿ

ಮೇಕೆದಾಟು ಯೋಜನೆಗೆ ಪರಿಷ್ಕೃತ ಸಮಗ್ರ ಯೋಜನಾ ವರದಿ (ಡಿಪಿಆರ್) ಸಲ್ಲಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ. ಈ ಯೋಜನೆಯ ಡಿಪಿಆರ್ ಬಗ್ಗೆ ದೇವೇಗೌಡರು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮಹತ್ವದ ಸಲಹೆಗಳನ್ನು ನೀಡಿದ್ದರು. ಆ ಬಗ್ಗೆ ಪ್ರಧಾನಿಗಳು ಹಾಗೂ ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಕೂಡ ಸಮಾಲೋಚನೆ ನಡೆಸಿದ್ದರು. ಮೊದಲ ಹಂತದಲ್ಲಿ 30 ಟಿಎಂಸಿಯಷ್ಟು ನೀರು ನಿಲ್ಲಿಸಿಕೊಳ್ಳಲು ಗೇಟ್ ಅಳವಡಿಸಬೇಕು ಎಂದು ದೇವೇಗೌಡರು ಹೇಳಿದ್ದರು. ಅವರ ಸಲಹೆಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಸ್ವಾತಂತ್ರ್ಯಪೂರ್ವ ಕಾಲದಿಂದಲೂ ತಮಿಳುನಾಡು ಕ್ಯಾತೆ ತೆಗೆಯುತ್ತಾ ಬಂದಿದೆ. ಈ ಸಮಸ್ಯೆ ನಿರಂತರ ಎನ್ನುವಂತೆ ಆ ರಾಜ್ಯವು ಬಿಂಬಿಸುತ್ತಾ ಬಂದಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರು ಬರಿದಾಗಿದೆ ಎನ್ನುವ ಮಾಹಿತಿಯಿದ್ದರೂ ನೀರಿಗಾಗಿ ಅನಗತ್ಯವಾಗಿ ಪಾಠ ಮಾಡುತ್ತಿದೆ. ತನಗೆ ಕೃಷಿ ಉದ್ದೇಶಕ್ಕೆ ನೀರು ಬೇಕೋ ಅಥವಾ ಕುಡಿಯುವ ಉದ್ದೇಶಕ್ಕೆ ಬೇಕೋ ಎನ್ನುವ ಬಗ್ಗೆ ಆ ರಾಜ್ಯ ಸ್ಪಷ್ಟವಾಗಿ ಹೇಳುತ್ತಿಲ್ಲ. ಈಗೇನು ಮಳೆ ಬಿದ್ದಿದೆ, ಸಮಸ್ಯೆ ಬಗೆರಿದಿದೆ ಎಂದು ಭಾವಿಸುವುದು ಬೇಡ. ತಾತ್ಕಾಲಿಕವಾಗಿ ಮಾತ್ರ ಸಮಸ್ಯೆ ಕೊಂಚ ಮಟ್ಟಿಗೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಇರುತ್ತದೆ ಎಂದು ನಂಬುವಂತಿಲ್ಲ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.


Share

You cannot copy content of this page