ಸಮಗ್ರ ಸುದ್ದಿ

ಸರ್ಕಾರಕ್ಕೆ 143 ಕೋಟಿ ರೂ. ಲಾಭಾಂಶ ಕೊಟ್ಟ ಕೆಎಸ್ಐಐಡಿಸಿ: ಚೆಕ್ ಹಸ್ತಾಂತರಿಸಿದ ಸಚಿವ ಎಂ.ಬಿ. ಪಾಟೀಲ

Share

ಬೆಂಗಳೂರು:2024-25ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಗಳಿಸಿದ ನಿವ್ವಳ ಲಾಭದಲ್ಲಿ 143.12 ಕೋಟಿ ರೂ.ಗಳ ಲಾಭಾಂಶವನ್ನು (ಡಿವಿಡೆಂಡ್) ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೋಮವಾರ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ 3 ಕೋಟಿ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ನಿಗಮವು 2024-25ರಲ್ಲಿ ಒಟ್ಟು ತೆರಿಗೆ ಕಡಿತದ ಬಳಿಕ 188.41 ಕೋಟಿ ರೂ. ಲಾಭ ಗಳಿಸಿತ್ತು. ಜತೆಗೆ 2025-26ನೇ ಸಾಲಿನಲ್ಲಿ ಸಂಸ್ಥೆಗೆ 19.34 ಕೋಟಿ ರೂ.ಗಳಷ್ಟು ಹಣವು ವಿಶೇಷ ಡಿವಿಡೆಂಡ್ ಲಾಭ ಬಂದಿತ್ತು. ನಿಯಮಾನುಸಾರವಾಗಿ ಲಾಭಾಂಶದ ಪೈಕಿ ಶೇ.30ರಷ್ಟನ್ನು ಈಗ ಸರಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ಕೆಎಸ್ಐಐಡಿಸಿ ಸಂಸ್ಥೆಗೆ ಕ್ಯಾಮ್ಕೊ, ಕ್ಯಾಟ್ಕೊ, ಎಂಎಸ್ಐಎಲ್, ಎಚ್.ಜಿ.ಎಂ.ಎಲ್ ಮುಂತಾದ ಉದ್ದಿಮೆಗಳಿಂದ ಈ ಆದಾಯ ಬಂದಿದೆ. ಸಾರ್ವಜನಿಕ ಉದ್ದಿಮೆಗಳು ಲಾಭದ ಹಳಿಗೆ ಮರಳುತ್ತಿರುವುದು ಮತ್ತು ಕಳೆದ ಮೂರು ವರ್ಷಗಳಿಂದ ಇದು ಸಾರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅವರು ನುಡಿದಿದ್ದಾರೆ.

ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಕಾರ್ಯನಿರ್ವಾಹಕ ನಿರ್ದೇಶಕ ಚಿದಾನಂದ್ ಉಪಸ್ಥಿತರಿದ್ದರು.


Share

You cannot copy content of this page