ಸಮಗ್ರ ಸುದ್ದಿ

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರ | 50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಭಾಗಿ, ಕರ್ನಾಟಕಕ್ಕೆ ನೀತಿ ನಿರೂಪಣೆಯ ಅವಕಾಶ

Share

ಬೆಂಗಳೂರು:ರಕ್ಷಣಾ ವಲಯದಲ್ಲಿ ಆಮದನ್ನು ಕಡಿಮೆ ಮಾಡಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ `ರಕ್ಷಣಾ ವಲಯದ ಉತ್ಪಾದನೆಯಲ್ಲಿ ಭಾರತದ ಆತ್ಮನಿರ್ಭರತೆ’ ಯೋಜನೆಗೆ ಸಂಬಂಧಿಸಿದ ಮಹತ್ತ್ವದ ಕಾರ್ಯಾಗಾರ ಬೆಂಗಳೂರಿನ ಖನಿಜ ಭವನದಲ್ಲಿ ಮಂಗಳವಾರ ನಡೆಯಿತು.

ಈ ಸಭೆಯಲ್ಲಿ ಕೇಂದ್ರ ಸರಕಾರದ ರಕ್ಷಣಾ ಮತ್ತು ಕೌಶಲ್ಯಾಭಿವೃದ್ಧಿ ಸಚಿವಾಲಯ, ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಐಟಿ ಇಲಾಖೆ ಹಾಗೂ ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳಾಗಿರುವ ಎಚ್ಎಎಲ್, ಬಿಡಿಎಲ್, ಬಿಇಎಂಎಲ್, ಜೊತೆಗೆ ರಕ್ಷಣಾ ವಲಯದ ಮುಂಚೂಣಿ ಉದ್ದಿಮೆಗಳ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಐಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ ಮಾತನಾಡಿ, `ದೂರದೃಷ್ಟಿಯುಳ್ಳ ಈ ಯೋಜನೆಯು ರಕ್ಷಣಾ ವಲಯದ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಿದೆ. ರಾಜ್ಯವು ರಕ್ಷಣೆ ಮತ್ತು ವೈಮಾಂತರಿಕ್ಷ ವಲಯಗಳಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಇದಕ್ಕೆ ಅಗತ್ಯವಿರುವ ನೀತಿಯನ್ನು ರೂಪಿಸುವ ಹೊಣೆಗಾರಿಕೆಯ ನೇತೃತ್ವವನ್ನು ಕರ್ನಾಟಕಕ್ಕೆ ವಹಿಸಲಾಗಿದೆ. ನಾವು ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಿ ಕೊಡಲಿದ್ದೇವೆ. ಜೊತೆಗೆ ರಾಷ್ಟ್ರಮಟ್ಟದಲ್ಲೂ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದಿದ್ದಾರೆ.

ರಕ್ಷಣಾ ವಲಯದಲ್ಲಿ ಉತ್ಪಾದನೆಗೆ ಇರುವ ಅಡಚಣೆಗಳೇನು, ಇದಕ್ಕಿರುವ ಪರಿಹಾರಗಳೇನು, ಒದಗಿಸಬೇಕಿರುವ ಮೂಲಸೌಕರ್ಯಗಳು, ಆಗಬೇಕಿರುವ ಸಾಂಸ್ಥಿಕ ವ್ಯವಸ್ಥೆ, ಪರೀಕ್ಷೆಗಳು, ರಕ್ಷಣಾ ಉದ್ಯಮ ಕಾರಿಡಾರ್, ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಪ್ರವೇಶ ಮತ್ತು ರಫ್ತು ವಹಿವಾಟು ಮೊದಲಾದ ಪ್ರಮುಖ ಆರು ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರೊಂದಿಗೂ ಚರ್ಚಿಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಆರು ತಂಡಗಳನ್ನು ಹಿಂದ್ ಹೈ ವ್ಯಾಕ್ಯೂಮ್, ಎಐಎ, ಧರ್ತಿ ಫೌಂಡೇಷನ್, ಐಐಎಸ್ಸಿ, ನ್ಯೂ ಸ್ಪೇಸ್ ರೀಸರ್ಚ್, ಐಐಟಿ-ಧಾರವಾಡ ಮತ್ತು ಮೆರ್ಲಿನ್ಹಾಕ್ ಸಂಸ್ಥೆಗಳು ಮುನ್ನಡೆಸುತ್ತಿವೆ. ಈ ಮುಕ್ತ ಸಂವಾದದಲ್ಲಿ ಕರ್ನಾಟಕದ ಸಾಮರ್ಥ್ಯಕ್ಕೆ ಪೂರಕವಾಗಿ ದೀರ್ಘಾವಧಿಯ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ರೂಪಣೆ, ಏಕಗವಾಕ್ಷಿ ವ್ಯವಸ್ಥೆಸಹಿತ ನೆರವು ಘಟಕ, ಉತ್ಪಾದನಾ ಕ್ಲಸ್ಟರುಗಳ ಅಭಿವೃದ್ಧಿ, ರಕ್ಷಣಾ ಪರೀಕ್ಷಾ ಕೇಂದ್ರ ಸ್ಥಾಪನೆ, ಸಣ್ಣ ಮತ್ತು ಮಧ್ಯಮ ಸ್ವರೂಪದ ಉದ್ಯಮಗಳ ಬಲವರ್ಧನೆ, ಬೆಂಗಳೂರು-ಮೈಸೂರು-ಬೆಳಗಾವಿ ರಕ್ಷಣಾ ಕಾರಿಡಾರ್ ಸ್ಥಾಪನೆ, ಇದಕ್ಕೆ ಬೆಂಬಲವಾಗಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಕೈಗಾರಿಕಾ ಪಾರ್ಕುಗಳ ಸ್ಥಾಪನೆ, ಉತ್ಕೃಷ್ಟತಾ ಕೇಂದ್ರಗಳ ಆರಂಭ ಮುಂತಾದವನ್ನು ಕುರಿತು ವಿಚಾರ ವಿನಿಮಯ ನಡೆಸಲಾಗಿದೆ.

ಕಾರ್ಯಾಗಾರದಲ್ಲಿ ರಕ್ಷಣಾ ಇಲಾಖೆಯ ಉನ್ನತಾಧಿಕಾರಿ ಚಂದ್ರದೀಪ್ ಸಿಂಗ್, ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್ ಎನ್ ಗೋಪಾಲಕೃಷ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕ ಜ್ಞಾನೇಂದ್ರ ಗಂಗವಾರ್ ಮುಂತಾದವರು ಭಾಗವಹಿಸಿದ್ದರು. ಒಟ್ಟಾರೆಯಾಗಿ ಎಲ್ ಅಂಡ್ ಟಿ, ಮಹೀಂದ್ರ ಏರೊಸ್ಪೇಸ್, ಏಕಸ್, ಗೆಲಾಕ್ಸಿ, ದಿಗಂತರ ಮುಂತಾದ 50ಕ್ಕೂ ಹೆಚ್ಚು ಉನ್ನತ ಪ್ರತಿನಿಧಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.


Share

You cannot copy content of this page