ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿರುವ ಕಸ ರಸ ಘಟಕಕ್ಕೆ ಇಂದು ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು ಭೇಟಿ ನೀಡಿ ಕಸ ಸಂಗ್ರಹಣ ಆಟೋ ಚಾಲಕರ ಮೇಲೆ ನಿಗಾ ಇಡುವ ಸಂಬಂಧ ಪ್ರಾಯೋಗಿಕವಾಗಿ ಪರಿಚಯಿಸಿರುವ MATRA ಅಪ್ಲಿಕೇಶನ್ ಬಳಕೆ ಕುರಿತಂತೆ ಪರಿಶೀಲನೆ ನಡೆಸಿದರು.
ಆಟೋಗಳ ಲೈವ್ ಟ್ರ್ಯಾಕಿಂಗ್ ಮಾಹಿತಿ ಸಂಗ್ರಹ
ಈ ಅಪ್ಲಿಕೇಶನ್ ಮೂಲಕ ಕಸ ಸಂಗ್ರಹಣಾ ಆಟೋಗಳು ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆಯೇ? ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ? ಎಷ್ಟು ದೂರ ಕ್ರಮಿಸಿವೆ? ಹಾಗೂ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದೆ? ಎಂಬುದರ ಕುರಿತ ಸಮಗ್ರ ಮಾಹಿತಿ ಈ ಅಪ್ಲಿಕೇಶನ್ ಮೂಲಕ ಲಭ್ಯವಾಗುತ್ತದೆ. ಜಿಪಿಎಸ್ ಟ್ರ್ಯಾಕಿಂಗ್ ತಂತ್ರಜ್ಞಾನ ಹೊಂದಿರುವ ಈ ಅಪ್ಲಿಕೇಶನ್ ಅನ್ನು ಪ್ರಸ್ತುತ 25 ಕಸ ಸಂಗ್ರಹಣಾ ಆಟೋ ಚಾಲಕರ ಮೊಬೈಲ್‌ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಆಯುಕ್ತರಿಗೆ ವಿವರಿಸಿದರು.
ಕೋರಮಂಗಲ ವಾರ್ಡ್‌ನಲ್ಲಿ MATRA app ಬಳಕೆಗೆ ಪ್ರಾಯೋಗಿಕ ಚಾಲನೆ
ಕೋರಮಂಗಲ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ಆಟೋಗಳ ಕಾರ್ಯನಿರ್ವಾಹಣಾ ಸಂಖ್ಯೆ ಹಾಗೂ ಸಮಯ ನಿಗದಿ ಕುರಿತಂತೆ ಸಾರ್ವಜನಿಕರಿಂದ ಪ್ರತಿನಿತ್ಯ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕಸ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಸರಿಪಡಿಸಲು ಕೋರಮಂಗಲ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ MATRA ಅಪ್ಲಿಕೇಶನ್ ಬಳಸಲಾಗುತ್ತಿದೆ ಇದರಿಂದ ಕಸ ಸಂಗ್ರಹಣೆಯಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಕಡಿಮೆಯಾಗುವುದು ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದಾರ್ಥ ಕಾಲೋನಿ ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆಗೆ ಸೂಚನೆ
ಸಿದ್ದಾರ್ಥ ಕಾಲೋನಿ ವ್ಯಾಪ್ತಿಯಲ್ಲಿ 2 ಬ್ಲಾಕ್ ಸ್ಪಾಟ್‌ಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸ್ಥಳದಲ್ಲಿಂದ ಅಧಿಕಾರಿಗಳಿಗೆ ಸೂಚಿಸಿದರು. ಮುಂದುವರೆದು ಆ ಜಾಗಕ್ಕೆ ಕಸ ಹಾಕುವ ವ್ಯಕ್ತಿಗಳಿಗೆ ದಂಡ ವಿಧಿಸುವಂತೆ ತಿಳಿಸಿದರು.
ಅನೈತಿಕ ಚಟುವಟಿಕೆ ತಡೆಗೆ ಕಠಿಣ ಕ್ರಮ
ಕಸ ರಸ ಕೇಂದ್ರದ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಘಟಕದ ಒಳಗೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ಗುರುತಿನ ಚೀಟಿ ನೀಡಬೇಕು ಹಾಗೂ ಸಿಸಿಕ್ಯಾಮರಾ ಅಳವಡಿಸಲು ಸೂಚನೆ ನೀಡಿದರು. ಕೇಂದ್ರದ ಆವರಣಕ್ಕೆ ಯಾರಾದರೂ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತುರ್ತು ನಿರ್ವಹಣಾ ತರಬೇತಿ ಕೇಂದ್ರ ಪರಿಶೀಲನೆ
ಕಸ ರಸ ಕೇಂದ್ರದಲ್ಲಿ ಪ್ರವಾಹ ಮತ್ತು ವಿಪತ್ತು ಪರಿಸ್ಥಿತಿಗಳಲ್ಲಿ ತುರ್ತು ಸ್ಪಂದನಾ ತರಬೇತಿಗಾಗಿ ನಿರ್ಮಿಸಿರುವ ಕಚೇರಿ ಸ್ಥಳವನ್ನು ಆಯುಕ್ತರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಕೋರಿಕೆ ಮೇರೆಗೆ ಈ ಕಛೇರಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ವೇಳೆ BSWML AGM ಶಶಿಕಲಾ, MATRA app ಮುಖ್ಯಸ್ಥ ಸಿ.ವಿ. ಕುಮಾರ್, ಘನತ್ಯಾಜ್ಯ ನಿರ್ವಹಣೆ ತಜ್ಞೆ ಪದ್ಮಶ್ರೀ ಬಲರಾಮ್ ಹಾಗೂ ಪಾಲಿಕೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
