ಬೆಂಗಳೂರು: ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ ಹಳೆಯ ಮನೆಗಳಿಗೆ ಇ- ಸ್ವತ್ತು ನೀಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ಮಾಡಲು ಸೂಚನೆ ನೀಡಲಾಗಿದೆ. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿಂದು ಉನ್ನತಾಧಿಕಾರಿಗಳೊಂದಿಗೆ ವಿಬಿಜಿ ರಾಮ್ ಜಿ ಮತ್ತು ಇಸ್ವತ್ತು ಕುರಿತಂತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಸುಮಾರು 65 ಲಕ್ಷ ಆಸ್ತಿಗಳು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಅವರಿಗೆ ಪೂರ್ವಜರಿಂದ ಬಂದ ಬಳುವಳಿಯಾಗಿದ್ದು, ಕೆಲವರ ಬಳಿ ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲ. ಹೀಗಾಗಿ ಒಂದು ಬಾರಿಯ ಕ್ರಮವಾಗಿ ನಿಯಮಾವಳಿ ಸರಳೀಕರಣ ಮಾಡಿ, ಸಾರ್ವಜನಿಕರ ಆಕ್ಷೇಪಣೆ ಕರೆದು 100 ದಿನಗಳ ಒಳಗಾಗಿ ಗ್ರಾಮಠಾಣಾ ಆಸ್ತಿಗಳಿಗೆ ಸಮರೋಪಾದಿಯಲ್ಲಿ ಇ-ಖಾತಾ ವಿತರಿಸಲು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು.
ಗ್ರಾಮೀಣ ಜನರಿಗೆ ಮೂಲ ನಿವಾಸಿಗಳಿಗೆ ಆಸ್ತಿಯ ಹಕ್ಕು ನೀಡಬೇಕು ಎಂಬುದು ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮತ್ತು ಸರ್ಕಾರದ ಆಸ್ತಿ (ಖರಾಬು, ಗೋಮಾಳ ಇತ್ಯಾದಿ )ಗಳನ್ನು ಸಂರಕ್ಷಿಸಿಕೊಂಡು, ಸ್ವಾಧೀನದಲ್ಲಿರುವವರಿಗೆ ಖಾತಾ ನೀಡಲು ಕ್ರಮ ವಹಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಹೊಸದಾಗಿ 11ಬಿ ಅರ್ಜಿ ಸಲ್ಲಿಸಲು ಕಾಲವಕಾಶ ವಿಸ್ತರಣೆ:
ನಮೂನೆ 11 ಬಿ ಯಲ್ಲಿ ಆಸ್ತಿಗಳಿಗೆ ಅರ್ಜಿ ಸಲ್ಲಿಸಲು, ಮುಂದಿನ ಸೆಪ್ಟೆಂಬರ್ ವರೆಗೆ ಕಾಲಾವಕಾಶ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಗ್ರಾಮೀಣರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈವರೆಗೆ 10.16 ಲಕ್ಷ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿದೆ. ಇನ್ನೂ 90 ಲಕ್ಷ ಆಸ್ತಿಗಳಿಗೆ ಎ ಮತ್ತು ಬಿ ಖಾತಾ ನೀಡಬೇಕಾಗಿದೆ ಎಂದರು. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಾವುದೇ ವಸತಿ ಬಡಾವಣೆಯಲ್ಲಿ ಸರ್ಕಾರಿ ಎ ಮತ್ತು ಬಿ ಖರಾಬು ಜಮೀನೂ ಬಳಸಿಕೊಂಡು ಲೇಔಟ್ ನಿರ್ಮಾಣ ಮಾಡಿದ್ದರೆ, ಅಂತಹ ಆಸ್ತಿಗಳಿಗೆ ಇ-ಸ್ವತ್ತು ನೀಡದಂತೆ ಸೂಚಿಸಲಾಗಿದೆ. ಇಂತಹ ಸ್ವತ್ತುಗಳನ್ನು ದಿಶಾಂಕ್ ಆಪ್ ನಲ್ಲಿ ಖರಾಬು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 5928 ಗ್ರಾಮ ಪಂಚಾಯ್ತಿಗಳಿದ್ದು ಒಟ್ಟಾರೆ 1.50 ಕೋಟಿ ಆಸ್ತಿಗಳಿವೆ. ಈ ಪೈಕಿ ಈಗಾಗಲೇ 53.53 ಸ್ವತ್ತುಗಳಿಗೆ ಇ-ಸ್ವತ್ತು ನೀಡಲಾಗಿದೆ. ಉಳಿದ ಆಸ್ತಿಗಳಿಗೆ ಸಮರೋಪಾದಿಯಲ್ಲಿ ಇ-ಸ್ವತ್ತು ನೀಡಲು ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
15 ದಿನಗಳಿಗಿಂತ ವಿಳಂಬವಾಗಿದ್ದರೆ ಪಿಡಿಓಗಳಿಗೆ ನೋಟಿಸ್:
ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿ 15 ದಿನಕ್ಕಿಂತ ಹೆಚ್ಚು ವಿಳಂಬವಾಗಿದ್ದರೆ, ತಾಂತ್ರಿಕ ದೋಷ ಹೊರತುಪಡಿಸಿ, ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದರೆ ಅಂತಹ ಪಿಡಿಓಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಈಶ್ವರ ಖಂಡ್ರೆ ಸೂಚಿಸಿದರು.
ದಾಖಲೆ ಇಲ್ಲದೆ ಕೆಲವು ಪಿಡಿಓಗಳು ಇ-ಸ್ವತ್ತು ನೀಡುತ್ತಿದ್ದಾರೆ ಅವರ ಮೇಲೆ ಯಾವ ಕ್ರಮ ಜರುಗಿಸುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸಾಕ್ಷಿ ಸಹಿತ ದೂರು ಬಂದರೆ, ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿ ಖಾತೆಗಳನ್ನು ಎ ಖಾತೆಯಾಗಿ ಪರಿವರ್ತಿಸಲು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮಳೆ ಕೊರತೆ, ಕುಡಿವ ನೀರಿಗೆ ಹಣದ ಕೊರತೆ ಇಲ್ಲ:
ಎಲ್ ನಿ ನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ಈ ವರ್ಷ ಜೂನ್ ತಿಂಗಳವರೆಗೆ ಶೇ.42ರಷ್ಟು ಮಳೆ ಕೊರತೆ ಆಗಿದೆ. ರಾಜ್ಯದಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. ಕಳೆದ ಬೇಸಿಗೆಯಲ್ಲಿ 1000 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಅಲ್ಲಿ ಹೊಸ ಕೊಳವೆ ಬಾವಿ ಕೊರೆದು ನೀರು ಪೂರೈಸಲಾಗುತ್ತಿತ್ತು ಎಂದರು.
ಮಳೆ ಕೊರತೆಯಿಂದ ಪ್ರಸ್ತುತ 826 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಗ್ರಾಮಗಳಿಗೆ ನೀರು ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ರಾಜ್ಯ ಸರ್ಕಾರ ಈಗಾಗಲೇ 117 ಕೋಟಿ ರೂ. ಹಣವನ್ನು ಮುಂಗಡ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ಡಿ. ರಣದೀಪ್, ಆಯುಕ್ತರಾದ ಅರುಂದತಿ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.
