ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಡಿಜಿಟಲ್ ಸೇವೆಗಳಿಗೆ ಕೇಂದ್ರಬಿಂದುವಾಗಿರುವ ರಾಜ್ಯ ಡಾಟಾ ಸೆಂಟರ್‌ನಲ್ಲಿ ಮಹತ್ವದ ತಾಂತ್ರಿಕ ನಿರ್ವಹಣೆ, ಮೂಲಸೌಕರ್ಯ ನವೀಕರಣ ಹಾಗೂ ಭದ್ರತಾ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ದಿನಗಳ ಕಾಲ ಡಾಟಾ ಸೆಂಟರ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ವೆಬ್ ಪೋರ್ಟಲ್‌ಗಳು, ನಾಗರಿಕ ಸೇವಾ ವ್ಯವಸ್ಥೆಗಳು, ವಿವಿಧ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳು, ಇ-ಆಫೀಸ್ ವ್ಯವಸ್ಥೆಗಳು, ಇಲಾಖೆಗಳ ಡಿಜಿಟಲ್ ಡೇಟಾಬೇಸ್‌ಗಳು ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ಸರ್ಕಾರಿ ಸೇವೆಗಳು ಈ ಡಾಟಾ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಿರ್ವಹಣಾ ಕಾರ್ಯ ನಡೆಯುವ ಅವಧಿಯಲ್ಲಿ ಕೆಲವು ಸೇವೆಗಳ ಲಭ್ಯತೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಸಚಿವರು ವಿವರಿಸಿದ್ದಾರೆ.
ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠ, ಸುರಕ್ಷಿತ ಹಾಗೂ ಹೆಚ್ಚಿನ ಸಾಮರ್ಥ್ಯವುಳ್ಳದಾಗಿಸಲು ಈ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ನಾಗರಿಕರಿಗೆ ಇನ್ನಷ್ಟು ವೇಗವಾಗಿ, ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಮತ್ತು ಸುರಕ್ಷಿತ ರೀತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಅಪ್‌ಗ್ರೇಡ್ ಅತ್ಯಂತ ಅಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಡಿಜಿಟಲ್ ಸೇವೆಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಡಾಟಾ ಸಂಸ್ಕರಣಾ ಸಾಮರ್ಥ್ಯ, ಸೈಬರ್ ಭದ್ರತೆ, ಸರ್ವರ್ ಕಾರ್ಯಕ್ಷಮತೆ ಹಾಗೂ ಸೇವೆಗಳ ಸ್ಥಿರತೆಯನ್ನು ಇನ್ನಷ್ಟು ಸುಧಾರಿಸುವ ಅಗತ್ಯ ಎದುರಾಗಿದೆ. ಇದೇ ಕಾರಣಕ್ಕೆ ತಜ್ಞರ ಸಲಹೆ ಮೇರೆಗೆ ಈ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಎರಡು ದಿನಗಳ ಅವಧಿಯಲ್ಲಿ ಸಾರ್ವಜನಿಕರು ಸರ್ಕಾರಿ ಆನ್‌ಲೈನ್ ಸೇವೆಗಳನ್ನು ಬಳಸುವಾಗ ಕೆಲವು ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬೇಕಾಗಬಹುದು, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಬಾರದೆಂದು ರಜಾ ದಿನಗಳಲ್ಲಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ, ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಇದು ತಾತ್ಕಾಲಿಕ ಅಸೌಕರ್ಯ ಮಾತ್ರ. ಆದರೆ ಈ ಕಾರ್ಯ ಪೂರ್ಣಗೊಂಡ ನಂತರ ರಾಜ್ಯದ ಇ-ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆಗೊಳ್ಳಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ತಂತ್ರಜ್ಞಾನ ಹೂಡಿಕೆಯನ್ನು ಮಾಡುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕವನ್ನು ದೇಶದಲ್ಲೇ ಅತ್ಯುತ್ತಮ ಡಿಜಿಟಲ್ ಆಡಳಿತ ವ್ಯವಸ್ಥೆ ಹೊಂದಿರುವ ರಾಜ್ಯವನ್ನಾಗಿ ರೂಪಿಸುವ ದೃಷ್ಟಿಯಿಂದ ಸರ್ಕಾರ ಕ್ರಮಬದ್ಧವಾಗಿ ತಂತ್ರಜ್ಞಾನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
