ಸಮಗ್ರ ಸುದ್ದಿ

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಯುವಜನರ ಆತ್ಮಸಾಕ್ಷಾತ್ಕಾರ ಮತ್ತು ರಾಷ್ಟ್ರೀಯ ಜಾಗೃತಿ ಅತ್ಯಗತ್ಯ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವ ‘ಅಭಿವೃದ್ಧಿ ಹೊಂದಿದ ಭಾರತ 2047’ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸಂಶೋಧಕರು ಹಾಗೂ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಬೆಂಗಳೂರಿನ ಎಂಇಎಸ್ ಸ್ವಾಯತ್ತ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಅಭಿವೃದ್ಧಿ ಹೊಂದಿದ ಭಾರತ 2047 – ಸ್ವಯಂ ಸಾಕ್ಷಾತ್ಕಾರದಿಂದ ರಾಷ್ಟ್ರೀಯತೆಯವರೆಗೆ” ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡಿಸಿರುವ ‘ಅಭಿವೃದ್ಧಿ ಹೊಂದಿದ ಭಾರತ 2047’ ಸಂಕಲ್ಪವು ಭಾರತವನ್ನು ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿ ರೂಪಿಸುವ ಸಮಗ್ರ ರಾಷ್ಟ್ರೀಯ ಅಭಿಯಾನವಾಗಿದೆ. ಇದು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ, 140 ಕೋಟಿ ಭಾರತೀಯರ ಸಾಮೂಹಿಕ ರಾಷ್ಟ್ರೀಯ ಸಂಕಲ್ಪವಾಗಿದೆ ಎಂದು ಹೇಳಿದರು.

ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುತ್ತಿರುವ ಸಂದರ್ಭದಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯು ಕೇವಲ ಆರ್ಥಿಕ ಪ್ರಗತಿಗೆ ಸೀಮಿತವಾಗಿರದೆ, ಸ್ವಾವಲಂಬನೆ, ವೈಜ್ಞಾನಿಕ ನಾವೀನ್ಯತೆ, ಸಾಮಾಜಿಕ ಸಾಮರಸ್ಯ, ಸಾಂಸ್ಕøತಿಕ ಪ್ರಜ್ಞೆ ಮತ್ತು ನೈತಿಕ ಮೌಲ್ಯಗಳ ಸಮಗ್ರ ಸಮನ್ವಯವಾಗಿರಬೇಕು. ಇಂದು ಅಂತರಶಿಸ್ತೀಯ ಜ್ಞಾನದ ಯುಗವಾಗಿದ್ದು, ವಿಜ್ಞಾನ, ವಾಣಿಜ್ಯ ಮತ್ತು ಮಾನವಿಕ ವಿಷಯಗಳ ಸಮನ್ವಯ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ವಿಜ್ಞಾನವು ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಒದಗಿಸಿದರೆ, ವಾಣಿಜ್ಯವು ಆರ್ಥಿಕ ಅಭಿವೃದ್ಧಿಯ ಮಾರ್ಗವನ್ನು ತೋರಿಸುತ್ತದೆ ಹಾಗೂ ಮಾನವಿಕ ವಿಷಯಗಳು ಸಮಾಜಕ್ಕೆ ನೈತಿಕ ದಿಕ್ಸೂಚಿ ಮತ್ತು ಮಾನವೀಯ ಮೌಲ್ಯಗಳನ್ನು ನೀಡುತ್ತವೆ ಎಂದರು.

ಹೊಸ ಶಿಕ್ಷಣ ನೀತಿ–2020 ಬಹುಶಿಸ್ತೀಯ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ವಿಷಯಗಳ ಮಿತಿಗಳಿಂದ ಹೊರತಂದು ಸಮಗ್ರ ವ್ಯಕ್ತಿತ್ವ ರೂಪಿಸುವ ಗುರಿಯನ್ನು ಹೊಂದಿದೆ. “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬ ಭಾರತೀಯ ಜ್ಞಾನ ಪರಂಪರೆಯ ಸಂದೇಶವನ್ನು ಉಲ್ಲೇಖಿಸಿದ ಅವರು, ಶಿಕ್ಷಣವು ಸಮಾಜವನ್ನು ಬಡತನ, ಅಸಮಾನತೆ ಮತ್ತು ತಾರತಮ್ಯದಿಂದ ಮುಕ್ತಗೊಳಿಸುವ ಶಕ್ತಿಯಾಗಬೇಕು ಎಂದು ತಿಳಿಸಿದರು.

ಭಾರತೀಯ ಸಂಸ್ಕøತಿಯು ಆತ್ಮಾವಲೋಕನ ಮತ್ತು ಆತ್ಮಸಾಕ್ಷಾತ್ಕಾರದ ಸಂಸ್ಕøತಿಯಾಗಿದ್ದು, ವ್ಯಕ್ತಿಯ ಆತ್ಮಜಾಗೃತಿ ರಾಷ್ಟ್ರ ಜಾಗೃತಿಗೆ ದಾರಿ ಮಾಡಿಕೊಡುತ್ತದೆ. ಯುವಜನರು ಆತ್ಮವಿಶ್ವಾಸ, ಶಿಸ್ತು, ನೈತಿಕತೆ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡರೆ ರಾಷ್ಟ್ರ ಸ್ವಯಂ ಬಲಿಷ್ಠವಾಗುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ವಿಜ್ಞಾನ ಹಾಗೂ ಹಸಿರು ಇಂಧನ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಸಾಧನೆ ಮಾಡುತ್ತಿದೆ. ಜೊತೆಗೆ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕೆಂದು ಕರೆ ನೀಡಿದರು.

ಭಾರತವು ನವೋದ್ಯಮಗಳು, ಡಿಜಿಟಲ್ ಪಾವತಿಗಳು, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಜಾಗತಿಕ ಮನ್ನಣೆ ಗಳಿಸಿದ್ದು, ಇಂದಿನ ಯುವಕರು ಉದ್ಯೋಗ ಅರಸುವವರಷ್ಟೇ ಅಲ್ಲ, ಉದ್ಯೋಗ ಸೃಷ್ಟಿಕರ್ತರಾಗುವ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸ್ಮರಿಸಿದ ಅವರು, ಯುವಜನರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಜೀವನದ ಮಂತ್ರವನ್ನಾಗಿ ಅಳವಡಿಸಿಕೊಂಡು ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬೆಂಗಳೂರು ಜ್ಞಾನ, ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯ ಜಾಗತಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ದೇಶವನ್ನು ಮುನ್ನಡೆಸುತ್ತಿದೆ. ಎಂಇಎಸ್‍ನಂತಹ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಶಿಕ್ಷಣ ಸಂಘದ ಅಧ್ಯಕ್ಷರಾದ ಎಸ್.ಎಸ್. ರಾಮದಾಸ್,   ಡಾ. ಎಸ್.ಸಿ. ಶರ್ಮಾ, ಎಂಇಎಸ್ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ. ಹರಿಪ್ರಸಾದ್, ಪ್ರಾಂಶುಪಾಲ  ಡಾ. ಆದರ್ಶ್ ಎಚ್.ಜಿ., ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.


Share

You cannot copy content of this page