ಕೊಪ್ಪಳ:ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮೂರೂ ರಾಜ್ಯಗಳು ಸೇರಿ ಒಮ್ಮತದ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕೊಪ್ಪಳ ಜಿಲ್ಲೆ ಮುನಿರಾಬಾದ್ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ತುಂಗಭದ್ರಾ ಅಣೆಕಟ್ಟೆಯ 33 ಕ್ರಸ್ಟ್ ಗೇಟುಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.
ಇದು ದಕ್ಷಿಣ ಭಾರತದ ಐತಿಹಾಸಿಕ ಕಾರ್ಯಕ್ರಮ. 19ನೇ ಗೇಟ್ ತುಂಡರಿಸಿದಾಗ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಶಿವರಾಜ್ ತಂಗಡಗಿ ಹಾಗೂ ಅಧಿಕಾರಿಗಳು ಮಧ್ಯರಾತ್ರಿ ನನಗೆ ಕರೆ ಮಾಡಿ, ಅಣೆಕಟ್ಟು ನಡುಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ಅಂದು ಬೆಳಗ್ಗೆ 8 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದೆವು. ತಕ್ಷಣವೇ ಏನು ಮಾಡಬೇಕು ಎಂದು ತಜ್ಞರೊಂದಿಗೆ ಚರ್ಚಿಸಿ ಒಂದೇ ವಾರದಲ್ಲಿ ಗೇಟ್ ಬದಲಾವಣೆ ಮಾಡಲಾಯಿತು. ಆಮೂಲಕ ಈ ಭಾಗದ ರೈತರನ್ನು ರಕ್ಷಣೆ ಮಾಡಲಾಯಿತು ಎಂದು ತಿಳಿಸಿದರು.
ಗೇಟ್ ತುಂಡರಿಸಿದಾಗ ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಿದರು. ಶಾರದ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಅಜ್ಜಯ್ಯ ಅವರ ಪವಾಡ, ಹಂಪಿ ವಿರೂಪಾಕ್ಷನ ಕೃಪೆ, ರಾಘವೇಂದ್ರ ಸ್ವಾಮಿಯ ಶಕ್ತಿಯಿಂದಾಗಿ ಇಂತಹ ಮಹತ್ವದ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ನಮ್ಮ ಸರ್ಕಾರ 33 ಗೇಟ್ ಬದಲಾಯಿಸಲು ತೀರ್ಮಾನಿಸಿ ಈ ಮೂರು ರಾಜ್ಯಗಳ ರೈತರ ರಕ್ಷಣೆಗೆ ಭಗವಂತ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದು ನಾನು ನೀರಾವರಿ ಸಚಿವನಾಗಿದ್ದೆ. ಇಂದು ಮುಖ್ಯಮಂತ್ರಿಯಾಗಿದ್ದೇನೆ. ಆದರೂ ನಾನು ನಿಮ್ಮ ಸೇವಕ ಹಾಗೂ ನಿಮ್ಮ ಬಂಧು ಎಂದರು.
ಮೂರು ರಾಜ್ಯಗಳು ಸೇರಿ ತುಂಗಭದ್ರಾ ಅಣೆಕಟ್ಟು ರಕ್ಷಣೆ:
ತುಂಗಭದ್ರಾ ಅಣೆಕಟ್ಟು ರಕ್ಷಣೆ ಮಾಡಲಾಗಿದೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ. ಇಂದು ಸಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಅವರು ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಇತಿಹಾಸ ನಿರ್ಮಿಸಿದ್ದೇವೆ. ನಾವು ಇತಿಹಾಸ ಓದುವುದು ಹಾಗೂ ಸ್ಮರಿಸುವುದಕ್ಕಿಂತ ಇತಿಹಾಸ ಸೃಷ್ಟಿಸುವುದು ನಮ್ಮ ಗುರಿ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಹೇಳುತ್ತಿರುತ್ತೇನೆ. ಸಿ.ಆರ್ ಪಾಟೀಲ್ ಅವರ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಸೇರಿ ಮೂರು ರಾಜ್ಯಗಳ ರಕ್ಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಒಂದು ತಾಸು ಚರ್ಚಿಸಿ, ಐತಿಹಾಸಿಕ ತೀರ್ಮಾನ:
ಈ ಅಣೆಕಟ್ಟಿನ 33 ಟಿಎಂಸಿ ನೀರನ್ನು ಉಳಿಸುವ ಬಗ್ಗೆ ರೈತ ಮುಖಂಡರು ಸಲ್ಲಿಸಿರುವ ಮನವಿ ಸೇರಿದಂತೆ ಯಾವ ರೀತಿ ರಕ್ಷಿಸಿ, ರೈತ ಕುಟುಂಬಗಳನ್ನು ಕಾಪಾಡಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ನವಲಿ ಸಮನಾಂತರ ಜಲಾಶಯ, ಹೂಳೆತ್ತುವ ವಿಚಾರ ಸೇರಿದಂತೆ ಎಲ್ಲಾ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ತೀರ್ಮಾನವನ್ನು ಕೇಂದ್ರ ಸಚಿವರೇ ಪ್ರಕಟಿಸಲಿದ್ದಾರೆ. ಇಂದು ನಾವು ಒಂದು ತಾಸುಗಳ ಕಾಲ ಮಾಡಿರುವ ಚರ್ಚೆ ದೇಶದ ನೀರಾವರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಇತಿಹಾಸದ ಪುಟಕ್ಕೆ ಸೇರಲಿದೆ. ನಮ್ಮ ನೀರು, ನಮ್ಮ ಹಕ್ಕು ಆಶಯದ ಅಡಿ ಮೂರು ರಾಜ್ಯಗಳ ರೈತರ ರಕ್ಷಣೆಗೆ ನಾವು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇವೆ.
ಅಣೆಕಟ್ಟು ಇತಿಹಾಸ ಸ್ಮರಣೆ:
ತುಂಗಭದ್ರಾ ನದಿಗೆ ಜಲಾಶಯ ನಿರ್ಮಿಸುವ ಆಲೋಚನೆಗೆ 1860 ರಲ್ಲೇ ಬ್ರಿಟಿμï ಇಂಜಿನಿಯರ್ ಸರ್ ಆರ್ಥರ್ ಕಾಟನ್ ಅವರು ನಾಂದಿ ಹಾಡಿದ್ದರು. ತದನಂತರ 1949 ರಲ್ಲಿ ಇದರ ಕಾಮಗಾರಿ ಆರಂಭಗೊಂಡು ಪೂರ್ಣಗೊಳ್ಳುವ ಹೊತ್ತಿಗೆ ಅನೇಕ ಮಹನೀಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಸೇವೆ ಮಾಡುತ್ತಿದ್ದೇವೆ.
ನಾನು ಮುಖ್ಯಮಂತ್ರಿ ಆದ ಬಳಿಕ ಇದು ಎರಡನೇ ಸಾರ್ವಜನಿಕ ಕಾರ್ಯಕ್ರಮ. ರೈತನಿಗೆ ಸಂಬಳವಿಲ್ಲ, ಬಡ್ತಿ ಇಲ್ಲ, ಪಿಂಚಣಿ ಇಲ್ಲ, ರಜೆಯೂ ಇಲ್ಲ ಹಾಗೂ ನಿವೃತ್ತಿಯೂ ಇಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ಉಳಿಸಬೇಕು ಮತ್ತು ಈ ಭಾಗದ ಭತ್ತದ ಕಣಜವನ್ನು ಕಾಪಾಡಬೇಕು ಎಂಬ ದೃಢ ತೀರ್ಮಾನವನ್ನು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ತೆಗೆದುಕೊಂಡಿದ್ದೇವೆ ಎಂದರು.
