ಬೆಂಗಳೂರು: ಸರ್ಕಾರದ ಘನತೆಗೆ ಧಕ್ಕೆ ತರುವ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಅಧಿಕಾರಿಗಳು ತಮ್ಮ ವೃತ್ತಿಪರತೆ ಮೆರೆದು ಇಲಾಖೆಯ ಹಾಗೂ ಸರ್ಕಾರದ ಘನತೆಯನ್ನು ಎತ್ತಿಹಿಡಿಯಬೇಕು. ಲೋಪವೆಸಗಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಜೆ ದಿನವಾಗಿದ್ದರೂ ಸಭೆಗೆ ಆಗಮಿಸಿ ಇಲಾಖೆಯ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಿದ ಅಧಿಕಾರಿಗಳಿಗೆ ಇದೇ ವೇಳೆ ಅವರು ಧನ್ಯವಾದ ಅರ್ಪಿಸಿದರು.
ಅಬಕಾರಿ ಇಲಾಖೆ: ವರ್ಗಾವಣೆ ಕಾನೂನು ಬದಲಾವಣೆಗೂ ಸಿದ್ಧ!
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಇಲಾಖೆಯ ಸಿಬ್ಬಂದಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸ್ಪಷ್ಟಪಡಿಸಿದರು.
ಕಾನೂನು ತಿದ್ದುಪಡಿಯ ಎಚ್ಚರಿಕೆ: “ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಭಾವಿಸಬೇಡಿ. ಅಗತ್ಯ ಬಿದ್ದರೆ ವರ್ಗಾವಣೆ ಪ್ರಕ್ರಿಯೆಗೆ ಪೂರಕವಾದ ಕಾನೂನು ಬದಲಾವಣೆಯನ್ನು ತರಲು ಸರ್ಕಾರ ಸಿದ್ಧವಿದೆ,” ಎಂದು ಖಡಕ್ ಆಗಿ ನುಡಿದರು.
ಇ-ಹರಾಜು ಮತ್ತು ನವೀಕರಣ: ಇಲಾಖೆಯಲ್ಲಿ ಹೊಸದಾಗಿ ಜಾರಿಗೆ ತರಲಾದ AIB ಪದ್ಧತಿಯಿಂದ ನಿರೀಕ್ಷಿತ ಪ್ರಗತಿಯಾಗಿದೆ. ಮುಂದುವರಿದ ಭಾಗವಾಗಿ ಹೊಸದಾಗಿ 574 ಸನ್ನದುಗಳನ್ನು (Licenses) ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಸನ್ನದುದಾರರ ಅನುಕೂಲಕ್ಕಾಗಿ ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಿದರು.
ನೆರೆ ರಾಜ್ಯಗಳ ಮಾದರಿ: ಅಕ್ಕಪಕ್ಕದ ರಾಜ್ಯಗಳಲ್ಲಿ ಅಬಕಾರಿ ಇಲಾಖೆ ಕಾರ್ಯನಿರ್ವಹಿಸುತ್ತಿರುವ ವರದಿಗಳನ್ನು ಗಮನಿಸಲಾಗಿದ್ದು, ರಾಜ್ಯಕ್ಕೆ ನಿಗದಿಪಡಿಸಿರುವ ಆದಾಯದ ಗುರಿಯನ್ನು ತಲುಪಲು ಅಧಿಕಾರಿಗಳು ಶ್ರಮಿಸಬೇಕು ಎಂದು ಆದೇಶಿಸಿದರು.
ವಾಣಿಜ್ಯ ತೆರಿಗೆ ಇಲಾಖೆ: ಗಡಿಗಳಲ್ಲಿ ಕಟ್ಟುನಿಟ್ಟಿನ ನಿಗಾ, ತೆರಿಗೆ ಸೋರಿಕೆಗೆ ಬ್ರೇಕ್
”ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿ. ನೀವು ಶಕ್ತಿ ನೀಡದಿದ್ದರೆ ಸರ್ಕಾರ ನಡೆಸುವುದು ಕಷ್ಟ,” ಎಂದ ಸಿಎಂ, ಪ್ರಸಕ್ತ ಹಣಕಾಸು ವರ್ಷದ ತೆರಿಗೆ ಸಂಗ್ರಹದ ಗುರಿಯನ್ನು ಮೀರಿ ಸಾಧನೆ ಮಾಡುವಂತೆ ವಿಶ್ವಾಸ ವ್ಯಕ್ತಪಡಿಸಿದರು.
ದಾಖಲೆ ರಹಿತ ವಾಹನಗಳಿಗೆ ನೋ ಎಂಟ್ರಿ: ಯಾವುದೇ ಸರಕು ಸಾಗಣೆ ವಾಹನವು ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟಬಾರದು. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯಬೇಕು. ಇದರಲ್ಲಿ ಯಾವುದೇ ರಾಜಿ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ ಹಾಗೂ ಗಡಿ ಜಿಲ್ಲೆಗಳೂ ಸೇರಿದಂತೆ ರಾಜ್ಯಾದ್ಯಂತ ನನ್ನದೇ ಆದ ವೈಯಕ್ತಿಕ ಸಂಪರ್ಕ ಜಾಲವಿದೆ. ಪ್ರತಿಯೊಂದು ವಲಯದಿಂದಲೂ ನನಗೆ ನಿರಂತರ ಮಾಹಿತಿ ಬರುತ್ತದೆ. ಅಧಿಕಾರಿಗಳ ಕಾರ್ಯಕ್ಷಮತೆಯ ವರದಿ ಹಾಗೂ ನನಗೆ ಬರುವ ಮಾಹಿತಿ ಒಂದಕ್ಕೊಂದು ಹೊಂದಿಕೆಯಾಗಬೇಕು ಎಂದು ಎಚ್ಚರಿಸಿದರು.
ನೆರೆ ರಾಜ್ಯಗಳೊಂದಿಗೆ ಸಮನ್ವಯ: ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಜಂಟಿ ಕಾರ್ಯಾಚರಣೆಗಳ ಮೂಲಕ ತೆರಿಗೆ ವಂಚನೆ ತಡೆಯಲು ಸೂಚಿಸಿದರು.
ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ 2 ನೇ ಸ್ಥಾನ:
ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಉತ್ತಮ ಪ್ರಗತಿಯಾಗಿದ್ದು, ಕಳೆದ ಮೇ 2026ರ ವರೆಗಿನ ವರದಿಯಂತೆ ಕರ್ನಾಟಕ ಶೇ. 9 ರಷ್ಟು ಪ್ರಗತಿ ಸಾಧಿಸಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದ್ದು, ಗುಜರಾತ್ (ಶೇ. 5), ತಮಿಳುನಾಡು (ಶೇ. -7), ಮಹಾರಾಷ್ಟ್ರ (ಶೇ. 5) ಮತ್ತು ಉತ್ತರ ಪ್ರದೇಶ (ಶೇ. 8) ರಾಜ್ಯಗಳಿಗಿಂತ ಮುಂದಿದೆ. ಶೇ. 10 ರಷ್ಟು ಪ್ರಗತಿ ಸಾಧಿಸಿರುವ ತೆಲಂಗಾಣ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರಲು ಮಾರ್ಗಗಳನ್ನು ಹುಡುಕುವಂತೆ ಸಿಎಂ ತಿಳಿಸಿದರು.
ಐಐಟಿ ಹೈದರಾಬಾದ್ ಸಹಯೋಗ: ಜಿಎಸ್‌ಟಿ ವಂಚನೆಯ ಮೇಲೆ ತೀವ್ರ ನಿಗಾ ಇಡಲು ಹೈದರಾಬಾದ್ ಐಐಟಿ ಸಹಯೋಗದೊಂದಿಗೆ GST Analytical Portal ಬಳಸಲಾಗುತ್ತಿದ್ದು, 360 ಡಿಗ್ರಿ ದೃಷ್ಟಿಕೋನದಲ್ಲಿ ವಂಚನೆಗಳನ್ನು ಪತ್ತೆಹಚ್ಚಲಾಗುತ್ತಿದೆ.
ಬೋಗಸ್ ಕಂಪನಿಗಳ ವಿರುದ್ಧ ಸಮರ: ನಕಲಿ ರಶೀದಿ ಮತ್ತು ನಕಲಿ ಐಟಿಸಿ (ITC) ದೊಡ್ಡ ಸವಾಲಾಗಿದ್ದು, ಈವರೆಗೆ ಬೋಗಸ್ ಕಂಪನಿಗಳನ್ನು ಪತ್ತೆ ಹಚ್ಚಿ 166 ಕೋಟಿ ರೂ. ಸಂಗ್ರಹಿಸಲಾಗಿದೆ. ಇನ್ಮುಂದೆ ಇಂತಹ ವಂಚಕ ರಶೀದಿ ದಾರರನ್ನು ಬಂಧಿಸುವ ಪ್ರಮಾಣ ಹೆಚ್ಚಾಗಬೇಕು ಮತ್ತು ಲೋಪವೆಸಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೈಸೂರು ವಿಭಾಗಕ್ಕೆ ತರಾಟೆ: ಮೈಸೂರು ವಿಭಾಗದಲ್ಲಿ ಕಾರ್ಯಕ್ಷಮತೆ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ತಾಂತ್ರಿಕ ತೊಂದರೆಗಳ ನೆಪ ಒಡ್ಡದೆ ಫಲಿತಾಂಶ ತೋರ್ಪಡಿಸಬೇಕು ಎಂದು ತಾಕೀತು ಮಾಡಿದರು. ಬಾಕಿ ಇರುವ ಮೇಲ್ಮನವಿಗಳನ್ನು (Appeals) ಹಿರಿಯ ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು.
ಪ್ರಾಮಾಣಿಕ ತೆರಿಗೆದಾರರಿಗೆ ಕಿರುಕುಳವಿಲ್ಲ, ಆನ್‌ಲೈನ್‌ನಲ್ಲೇ ಪರಿಹಾರ
ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ಆದಾಯ ಹೆಚ್ಚಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
“ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರನ್ನು ಸುಲಿಗೆ ಮಾಡಬಾರದು ಮತ್ತು ಗೌರವದಿಂದ ನಡೆಸಿಕೊಳ್ಳಬೇಕು. ಕಾನೂನು ಮೀರಿ ಶೋಷಣೆ ಮಾಡಲು ನಾನು ಒಪ್ಪುವುದಿಲ್ಲ. ಅಧಿಕಾರಿಗಳು ತೆರಿಗೆದಾರರ ನೈಜ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ನಿಮ್ಮ ಇಲಾಖೆಯ ಸಮಸ್ಯೆಗಳಿದ್ದರೆ ಹೇಳಿ, ನೈಜವಾಗಿದ್ದರೆ ನಾನೇ ಪರಿಹರಿಸುತ್ತೇನೆ ಎಂದರು.
ನಾಗರಿಕ ಸ್ನೇಹಿ ಆನ್‌ಲೈನ್ ವ್ಯವಸ್ಥೆ: ತೆರಿಗೆದಾರರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಅವರ ಎಲ್ಲಾ ಗೊಂದಲಗಳು, ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ಆನ್‌ಲೈನ್ ಮೂಲಕವೇ ತ್ವರಿತವಾಗಿ ಪರಿಹರಿಸುವ ಸಮಗ್ರ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ನಿರಂತರ ಕಲಿಕೆಯೇ ಉತ್ತಮ ಆಡಳಿತದ ಮೂಲ
”ನನ್ನ 38 ವರ್ಷಗಳ ಸಾರ್ವಜನಿಕ ಜೀವನದ ಅನುಭವದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದೇನೆ. ಈಗ ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತಿದ್ದೇನೆ. ಕೇಳುವುದಕ್ಕೂ, ಕಲಿಯುವುದಕ್ಕೂ ನಾನು ಸದಾ ಸಿದ್ಧ. ಮುಂದಿನ ಸಭೆಯ ವೇಳೆಗೆ ನಾನು ನೀಡಿದ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಅಂದು ನೈಜ ಉದಾಹರಣೆಗಳೊಂದಿಗೆ ನಿಮ್ಮ ಕಾರ್ಯಕ್ಷಮತೆಯನ್ನು ನಾನೇ ಖುದ್ದಾಗಿ ಪರಿಶೀಲಿಸುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
