ಬೆಂಗಳೂರು: ರಾಜ್ಯದಲ್ಲಿ 72,000 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ, ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಅದನ್ನು ತುಂಬುತ್ತೇವೆ ಎಂದು ಹೇಳಿದ್ದೆವು. ಅನೇಕ ಕಾರಣಗಳಿಂದ ಅದು ವಿಳಂಬವಾಯಿತು. ಒಳಮೀಸಲಾತಿ ವಿಚಾರ ಬಗೆಹರಿಯದೆ ಇದ್ದದ್ದು ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಸಮಿತಿಯ ವರದಿ ಆಧಾರದ ಮೇಲೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಒಳಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಬಳಿಕ ಬಜೆಟ್‌ನಲ್ಲಿಯೇ 56,942 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ತಿಳಿಸಿದ್ದೆವು ಎಂದರು.
ಬಳಿಕ ಅದರ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದವು. 24,000 ಹುದ್ದೆಗಳಿಗೆ ಎಫ್‌ಡಿಯವರು ಕೂಡ ಅನುಮತಿಯನ್ನು ನೀಡಿದ್ದರು, ಎಲ್ಲಾ ಇಲಾಖೆಗಳಿಗೆ ನೋಟಿಫೀಕೇಷನ್ ಮಾಡಿ ಎಂದು ನಾವು ತಿಳಿಸಿದ್ದೆವು. ಈ ಮಧ್ಯೆ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯಾದ ನಂತರ ಅದನ್ನು ಪುನರ್ ಪರಿಶೀಲನೆ ಮಾಡಿ ಈಗ 72,000 ಹುದ್ದೆಗಳನ್ನು ತುಂಬಬೇಕು ಎಂದು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನೋಟಿಫಿಕೇಷನ್ಸ್ ಮಾಡಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಹಿರಿಯ ಅಧಿಕಾರಿಗಳ ನೇಮಕ:
ಅದೇ ರೀತಿ ಶಿಕ್ಷಕರು, ವೈದ್ಯರು, ನರ್ಸುಗಳು, ಇಂಜಿನಿಯರ್ಸ್‌ಗಳು ಸೇರಿದಂತೆ ಎಲ್ಲಾ ಇಲಾಖೆಗಳಿಗೆ ತಡಮಾಡದಂತೆ ತಿಳಿಸಬೇಕೆಂದು ಮೊನ್ನೆ ನಡೆದ ಕ್ಯಾಬಿನೇಟ್‌ನಲ್ಲಿ ಚರ್ಚೆ ಮಾಡಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಇಬ್ಬರು ಅಧಿಕಾರಿಗಳಾದ ಅಪರ ಮುಖ್ಯ ಕಾರ್ಯದರ್ಶಿಗಳಾದ ಅಧಿಕಾರಿ ಉಮಾ ಮಹದೇವನ್ ಮತ್ತು ಗೌರವ್ ಗುಪ್ತಾ ಅವರನ್ನು ಮೇಲುಸ್ತುವಾರಿಗಾಗಿ ನೇಮಕ ಮಾಡಿದ್ದಾರೆ ಎಂದರು.
ನಮ್ಮ ಉದ್ದೇಶವೆಂದರೆ ರಾಜ್ಯದಲ್ಲಿ ಅನೇಕ ನಿರುದ್ಯೋಗಿಗಳಿದ್ದಾರೆ, ಅವರೆಲ್ಲರೂ ಅನೇಕ ಸಂದರ್ಭದಲ್ಲಿ ನೇಮಕಾತಿ ಮಾಡುವಂತೆ ಬೀದಿಗಿಳಿದಿ ಹೋರಾಟ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ನಾವು ವೇಗವಾಗಿ 72,000 ಹುದ್ದೆಯನ್ನು ತುಂಬುತ್ತಿದ್ದೇವೆ ಎಂದರು.
ನಾವು ರೈತರನ್ನು ಒಕ್ಕಲೆಬ್ಬಿಸುವುದಿಲ್ಲ
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರಿಗೆ ಅನುಕೂಲವಾಗಿ ಮುಖ್ಯಮಂತ್ರಿ ಅವರ ನಿರ್ಧಾರ ಬದಲಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೊದಲೇ ಹೇಳಿದಂತೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಒತ್ತಾಯಪೂರ್ವಕವಾಗಿ ರೈತರನ್ನು ತೆಗೆದು ಆಚೆ ಹಾಕಿ ನಾವು ಟೌನ್‌ಶಿಪ್ ಕಟ್ಟುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಒಪ್ಪಿಗೆಯ ಮೂಲಕ ಅವರ ಜಮೀನನ್ನು ಪಡೆದು ಟೌನ್‌ಶಿಪ್ ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆಯನ್ನು ನೀಡಿದ್ದಾರೆ.
ಅವರಿಗೆ ಒಂದು ವೇಳೆ ತಮಗೆ ಕೊಡುವಂತಹ ಪರಿಹಾರ ಸಾಕಾಗುತ್ತಿಲ್ಲ ಎಂದು ಅನಿಸಿದರೆ ಅದನ್ನು ಕೂಡ ಇನ್ನು ಮುಂದೆ ಹೆಚ್ಚು ಮಾಡುವಂತಹ ಸಾಧ್ಯತೆಗಳು ಇದೆ. ಒಟ್ಟಾರೆ ಯಾವುದೇ ಗೊಂದಲ ಇಲ್ಲದೆ ಬಿಡದಿ ಟೌನ್‌ಶಿಪ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಬೆಂಗಳೂರಿನ ಒತ್ತಡ ಕಡಿಮೆಗೊಳಿಸಲು ಬಿಡದಿ ಅಭಿವೃದ್ಧಿಗೆ ಸರ್ಕಾರದ ಒತ್ತು:
ಎಐ ಹಬ್‌ಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುವ ಹಿನ್ನೆಲೆ, ಬಿಡದಿ ಪ್ರದೇಶದ ನೀರಿನ ಲಭ್ಯತೆಯನ್ನು ಮುಂದಿನ 40 ವರ್ಷಗಳ ದೃಷ್ಟಿಯಿಂದ ಸರ್ಕಾರ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಐ ಸೆಂಟರ್ ಮಾಡುವುದಕ್ಕೆ ಯಾವುದೆಲ್ಲ ಮಾನದಂಡಗಳು ಇವೆ ಎಂಬುದರ ಸ್ಪಷ್ಟ ಮಾಹಿತಿ ಯಾರಿಗೂ ಗೊತ್ತಿಲ್ಲ. ಈಗ ಅದನ್ನು ನಾವು ಬೇರೆ ಬೇರೆ ಕಡೆ ಪತ್ತೆ ಮಾಡುತ್ತಿದ್ದೇವೆ. ಇದು ಎಐ ಹಬ್‌ಗಾಗಿ ಮಾಡುತ್ತಿರುವಂತದಲ್ಲ. ಬೆಂಗಳೂರಿನ ಮೇಲೆ ಸಂಚಾರದಟ್ಟಣೆ ಸೇರಿದಂತೆ ಅನೇಕ ಒತ್ತಡವಿದೆ. ನೈಸ್ ಪ್ರಾಜೆಕ್ಟ್ ಮಾಡಿದ ಸಂದರ್ಭದಲ್ಲಿ 7 ಟೌನ್‌ಶಿಪ್ ಮಾಡಬೇಕು ಎಂದು ಪ್ರಸ್ತಾವನೆ ಬಂದಿದ್ದವು. ಇದರ ಉದ್ದೇಶ ಬೆಂಗಳೂರಿನ ಮೇಲಿರುವ ಒತ್ತಡವನ್ನು ಕಡಿಮೆಮಾಡಬೇಕು ಎನ್ನುವುದಾಗಿತ್ತು.
ಬೆಂಗಳೂರು ಪಕ್ಕದಲ್ಲಿರುವ ಕೋಲಾರ, ತುಮಕೂರು ರಾಮನಗರ ಪಟ್ಟಣವನ್ನು ಅಭಿವೃದ್ಧಿ ಮಾಡಿದರೆ ಬೆಂಗಳೂರಿನ ಮೇಲಿರುವ ಒತ್ತಡ ಕಡಿಮೆಯಾಗಲಿದೆ ಎನ್ನುವ ಉದ್ದೇಶ. ಈ ಕಾರಣಗಳಿಂದ ಬಿಡದಿ ಟೌನ್‌ಶಿಪ್ ಆದರೆ ಸ್ವಲ್ಪ ಸುಧಾರಿಸಬಹುದು ಎನ್ನುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
