ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನದ ನೆಪದಲ್ಲಿ ಗೋವಾ ರಾಜ್ಯದಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸುತ್ತಿರುವುದು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಪತ್ರ ಬರೆದಿರುವ ಅವರು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವಿದ್ಯಾರ್ಥಿಗಳು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂಬ ಲಘು ಹೇಳಿಕೆ ನೀಡಿರುವುದು ಅಘಾತಕಾರಿಯಾಗಿದ್ದು, ಇದು ಭಾರತ ಸಂವಿಧಾನವು ಪ್ರತಿಪಾದಿಸುವ ವೈವಿಧ್ಯತೆಯಲ್ಲಿ ಏಕತೆ ಎಂಬ ಆಶಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯು ಭಾಷಾ ವೈವಿಧ್ಯ ಮತ್ತು ಸಹಬಾಳ್ವೆಯ ಮೌಲ್ಯಗಳಿಗೆ ಹೇಗೆ ಧಕ್ಕೆಯುಂಟು ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ.
ನೆರೆ ರಾಜ್ಯಗಳ ಗಡಿ ಭಾಗದಲ್ಲಿ ವಾಸಿಸುವ ಸಾವಿರಾರು ಕನ್ನಡಿಗರು ಅವರ ಮಕ್ಕಳನ್ನು ಅಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಲು ಕಳುಹಿಸುವುದು ಹಲವಾರು ದಶಕಗಳಿಂದ ನಿರಂತರವಾಗಿ ನಡೆದು ಬಂದಿದ್ದು, ಉನ್ನತ ಶಿಕ್ಷಣಕ್ಕಾಗಿ ಅವರು ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಅವರಿಗೆ ಅಗತ್ಯ ಸಹಕಾರವನ್ನು ನೀಡುವ ಕೆಲಸವನ್ನು ಕರ್ನಾಟಕವು ಮುಂದುವರೆಸಿದೆ ಎಂದಿರುವ ಬಿಳಿಮಲೆ, ರಾಷ್ಟ್ರೀಯ ಶಿಕ್ಷಣ ನೀತಿ ಸಹಬಾಳ್ವೆಯ ಈ ಉನ್ನತ ಪರಂಪರೆಯ ಕೊಂಡಿಯನ್ನು ಒಂದೇ ಬಾರಿಗೆ ಕಳಚುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದಿದ್ದಾರೆ.
ಕರ್ನಾಟಕ ಸರ್ಕಾರದ ಸಚಿವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೊಂದನ್ನು ತಕ್ಷಣವೇ ಗೋವಾಕ್ಕೆ ಕಳುಹಿಸಿ, ಅಲ್ಲಿನ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ಕನ್ನಡ ಶಾಲೆಗಳ ಮುಚ್ಚುವಿಕೆ ಪ್ರಕ್ರಿಯೆಗೆ ತಕ್ಷಣವೇ ತಡೆ ತರಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ ಬಿಳಿಮಲೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಗೋವಾ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವು ಯಾವುದೇ ಪ್ರಾದೇಶಿಕ ಭಾಷೆ ಅಥವಾ ಭಾಷಾ ಅಲ್ಪಸಂಖ್ಯಾತರ ಅಸ್ತಿತ್ವಕ್ಕೆ ಮಾರಕವಾಗದಂತೆ ಕ್ರಮ ವಹಿಸಲು ಒತ್ತಡ ಹೇರಬೇಕು ಎಂದು ಕೋರಿದ್ದಾರೆ.
ಗೋವಾ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡಿ:
ಮಾತೃಭಾಷೆಯಲ್ಲಿ ಕಲಿಯುವ ಅವಕಾಶವನ್ನು ಕಳೆದುಕೊಳ್ಳುತ್ತಿರುವ ಗೋವಾ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಹಾಯಕ್ಕೆ ಕೇಂದ್ರ ಸರ್ಕಾರವು ಕೂಡಲೇ ಧಾವಿಸುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕೆಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಹ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿ ಗೋವಾ ಸರ್ಕಾರವು ಕೈಗೊಳ್ಳುತ್ತಿರುವ ತೀರ್ಮಾನವು ಕೇವಲ ಆಡಳಿತಾತ್ಮಕವಾದುದಾಗಿಲ್ಲ. ಬದಲಿಗೆ ಅದು ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನವಾಗಿದೆ ಎಂದಿದ್ದಾರೆ.
ಹಲವಾರು ಪೀಳಿಗೆಗಳಿಂದ ಕರ್ನಾಟಕದ ಗಡಿಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳನ್ನು ಅಲ್ಲಿಯ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಿ ಕೊಡುವ ಪ್ರಕ್ರಿಯೆ ನಡೆದು ಬಂದಿದ್ದು, ಇದು ಭಾಷಾ ವೈವಿಧ್ಯತೆಯನ್ನು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಗೌರವಿಸುವ ಮೌಲ್ಯಗಳಿಗೆ ಅನುಗುಣವಾಗಿದೆ ಎಂದಿರುವ ಬಿಳಿಮಲೆ, ಗೋವಾ ಸರ್ಕಾರದ ಪ್ರಸ್ತುತ ತೀರ್ಮಾನವು ಒಕ್ಕೂಟ ವ್ಯವಸ್ಥೆಗೆ ಅಗೌರವವನ್ನು ತರುತ್ತಿದ್ದು, ಕೂಡಲೇ ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದಿದ್ದಾರೆ.
