ಸಮಗ್ರ ಸುದ್ದಿ

ಅರಿವು ಕೇಂದ್ರಗಳ ಬಲವರ್ಧನೆಗೆ ಗೋಥೆ ಇನ್ಸ್ ಟಿಟ್ಯೂಟ್ ಜೊತೆ ಒಪ್ಪಂದ: ಈಶ್ವರ್ ಖಂಡ್ರೆ

Share

ಬೆಂಗಳೂರು: ರಾಜ್ಯದ 5886 ಅರಿವು ಕೇಂದ್ರ (ಗ್ರಾಮ ಗ್ರಂಥಾಲಯಗಳ) ಬಲವರ್ಧನೆಗೆ ಹಾಗೂ ಕಲೆ ಮತ್ತು ಸಂಸ್ಕೃತಿಯ ವಿನಿಮಯಕ್ಕಾಗಿ ಜರ್ಮನಿಯ ಗೋಥೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ತಿಳಿವಳಿಕೆ ಒಪ್ಪಂದ ವಿನಿಮಯದ ಬಳಿಕ ಮಾತನಾಡಿದ ಅವರು, ಗೋಥೆ ಸಂಸ್ಥೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ಜಾಲವನ್ನು ರೂಪಿಸುವ ಮೂಲಕ ಗ್ರಾಮೀಣ ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದರು.

ಜರ್ಮನಿಯ ಗೋಥೆ ಸಂಸ್ಥೆಯಿಂದ1.8 ಕೋಟಿ ರೂ :

ಅವಧಿಗೆ ಗೋಥೆ ಇನ್ಸ್ ಸ್ಟಿಟ್ಯೂಟ್ ಮುಂದಿನ 2 ವರ್ಷದಲ್ಲಿ 1.8 ಕೋಟಿ ರೂ.ವೆಚ್ಚ ಮಾಡುತ್ತಿದ್ದು, 9 ಲಕ್ಷ ರೂ. ಮೌಲ್ಯದ ಮಕ್ಕಳ ಕಥಾ ಪುಸ್ತಕಗಳನ್ನು ಅರಿವು ಕೇಂದ್ರಗಳಿಗೆ ಕೊಡುಗೆಯಾಗಿ ನೀಡಿದೆ ಎಂದರು.

ಇದಕ್ಕೆ ಕನೆಕ್ಟಿಂಗ್ ಡಾಟ್ಸ್ ಅಂದರೆ ವಿವಿಧ ಸಂಸ್ಥೆಗಳ ಅನುಭವವನ್ನು ಒಗ್ಗೂಡಿಸಿ, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ, ಜನರ ನಡುವೆ ಇರುವ ಜ್ಞಾನ ಕಂದಕವನ್ನು ನಿವಾರಿಸಲು ಒಂದು ಉತ್ತಮ ಸಂಪರ್ಕ ಜಾಲವನ್ನು ರೂಪಿಸುತ್ತದೆ ಎಂದರು.

ಕರ್ನಾಟಕದಲ್ಲಿ 5928 ಗ್ರಾಮ ಪಂಚಾಯ್ತಿಗಳಿದ್ದು, ರಾಜ್ಯದಾದ್ಯಂತ ಒಟ್ಟು 5886 ಅರಿವು ಕೇಂದ್ರ ಅಥವಾ ಗ್ರಾಮೀಣ ಗ್ರಂಥಾಲಯಗಳಿವೆ. ಈ ಎಲ್ಲ ಗ್ರಂಥಾಲಯಗಳಲ್ಲಿರುವ ಮೇಲ್ವಿಚಾರಕರು ಅಂದರೆ ಗ್ರಂಥಪಾಲಕರ ಸಾಮರ್ಥ್ಯ ಬಲವರ್ಧನೆಗೆ ಪಂಚಾಯತ್ ರಾಜ್ ಇಲಾಕೆ ಮತ್ತು ಗೋಥೆ ಸಂಸ್ಥೆ ಒಗ್ಗೂಡಿ ಶ್ರಮಿಸಲಿವೆ ಎಂದರು.

ಜೊತೆಗೆ ಕಲೆ, ಸಂಸ್ಕೃತಿಯ ವಿನಿಮಯ ಕಾರ್ಯಕ್ರಮದಡಿ ಕರ್ನಾಟಕದ ಗ್ರಾಮೀಣ ಕಲೆಗಳನ್ನು ಜರ್ಮನಿಯ ಜನರಿಗೆ ಪರಿಚಯಿಸುವ ಅದೇ ರೀತಿಯಲ್ಲಿ ಜರ್ಮನಿಯ ಸಾಂಸ್ಕೃತಿಕ ಕಲೆಗಳನ್ನು ಕರುನಾಡ ಗ್ರಾಮೀಣ ಜನತೆಗೆ ವಿಶೇಷವಾಗಿ ಯುವಜನರಿಗೆ ಪರಿಚಯಿಸುವ ವಿನಿಮಯ ಕಾರ್ಯಕ್ರಮವನ್ನೂ ಆಯೋಜಿಸುತ್ತದೆ ಎಂದರು.

ಜರ್ಮನಿಯಲ್ಲಿ ಉದ್ಯೋಗಾವಕಾಶ:

ಜರ್ಮನಿಯಲ್ಲಿ ಕುಶಲಿ ಕಾರ್ಮಿಕರ ಬೇಡಿಕೆ ಇದ್ದು, ಈ ಯೋಜನೆಯಡಿ ಗ್ರಾಮೀಣ ಭಾಗದ ಕುಶಲ ಯುವಜನರಿಗೆ ಜರ್ಮನ್ ಭಾಷೆಯನ್ನು ಕಲಿಸುವ ಮೂಲಕ ಭಾರತದ ಗ್ರಾಮೀಣ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಪಡೆಯಲೂ ನೆರವಾಗಲಿದೆ ಎಂದರು.

ಇಂದು ಸರ್ಕಾರ ಮತ್ತು ಗೋಥೆ ಇನ್ಸ್ಟಿಟ್ಯೂಟ್ ನಡುವೆ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದ್ದು, ಈ ಸಮಾರಂಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.
ಇಂದು ಜರ್ಮನಿಯಿಂದ ಆಗಮಿಸಿರುವ ಗೋಥೆ ಇನ್ಸ್ ಸ್ಟಿಟೂಟ್ ನ ನಿರ್ದೇಶಕರಾದ ಮಿಷಲ್ ಐನ್ಸ್ ಸ್ಟಿನ್, ಮ್ಯಾಕ್ಸ್ ಮುಲ್ಲರ್ ಭವನದ ಪ್ರಧಾನ ಗ್ರಂಥಪಾಲಕರಾದ ಶೇಷಗಿರಿ ಕುಲಕರ್ಣಿ, ಇಲಾಖೆ ಕಾರ್ಯದರ್ಶಿಗಳಾದ ಡಿ. ರಂದೀಪ್, ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.


Share

You cannot copy content of this page