ಬೆಂಗಳೂರು : ಬೆಂಗಳೂರು ನಗರವನ್ನು ಜಾಗತಿಕ ಸಾಂಸ್ಕೃತಿಕ ಮತ್ತು ಕಲಾ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಇಟಲಿ ದೇಶದ ಕೌನ್ಸಲೇಟ್ ಜನರಲ್ ಸಹಯೋಗದಲ್ಲಿ ವಿಶ್ವಪ್ರಸಿದ್ಧ ‘One Mother, Many Mother Tongues’ ಅಂತರರಾಷ್ಟ್ರೀಯ ಕಲಾ ಪ್ರದರ್ಶನವನ್ನು ಆಯೋಜಿಸಲು ಸಿದ್ಧತೆ ನಡೆಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಆಯುಕ್ತರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ .
ಈ ಸಂಬಂಧ ಇಟಲಿ ದೇಶದ ಕೌನ್ಸಲೇಟ್ ಜನರಲ್ ಶ್ರೀ Giandomenico Milano ಅವರನ್ನು ಭೇಟಿ ಮಾಡಿ, ಪ್ರದರ್ಶನದ ಆಯೋಜನೆ ಹಾಗೂ ಭಾರತ-ಇಟಲಿ ನಡುವಿನ ಸಾಂಸ್ಕೃತಿಕ ಸಹಕಾರ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಲಾಯಿತು.
ಭಾರತ ಮತ್ತು ಇಟಲಿ ನಡುವೆ ಹಲವು ದಶಕಗಳಿಂದ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳು ಉತ್ತಮವಾಗಿ ಬೆಳೆದು ಬಂದಿವೆ. ಈ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಉಭಯ ದೇಶಗಳು 2027ನೇ ವರ್ಷವನ್ನು “India–Italy Year of Culture and Tourism” ಎಂದು ಘೋಷಿಸಿವೆ. ಅದರ ಅಂಗವಾಗಿ ಈ ಅಂತರರಾಷ್ಟ್ರೀಯ ಕಲಾ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.
ವಿಶ್ವವಿಖ್ಯಾತ ಇಟಾಲಿಯನ್ ಪುನರುಜ್ಜೀವನ ಯುಗದ (Renaissance) ಕಲಾವಿದ Alessandro Botticelli ಅವರ ಅಮೂಲ್ಯ “Madonna con Bambino” ಸೇರಿದಂತೆ, ಸುಮಾರು 100 ಮಿಲಿಯನ್ ಯೂರೋ ಮೌಲ್ಯದ ಅಪರೂಪದ ಕಲಾಕೃತಿಗಳು ಈ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ. ವಿಶ್ವದ ಪ್ರಮುಖ ಕಲಾ ಸಂಗ್ರಹಗಳಲ್ಲಿ ಸ್ಥಾನ ಪಡೆದಿರುವ ಇಂತಹ ಕಲಾಕೃತಿಗಳು ಬೆಂಗಳೂರಿಗೆ ಆಗಮಿಸುತ್ತಿರುವುದು ನಗರದ ಸಾಂಸ್ಕೃತಿಕ ಇತಿಹಾಸದಲ್ಲೇ ಮಹತ್ವದ ಬೆಳವಣಿಗೆಯಾಗಿದೆ.
2026ರ ಆಗಸ್ಟ್ 19ರಿಂದ ಸೆಪ್ಟೆಂಬರ್ 29ರವರೆಗೆ ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಲ್ಲಿ ನಡೆಯಲಿರುವ ಈ ಪ್ರದರ್ಶನವು ದಕ್ಷಿಣ ಭಾರತದಲ್ಲೇ ಬೆಂಗಳೂರಿನಲ್ಲಿ ಮಾತ್ರ ಆಯೋಜನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರಾಜ್ಯದ ಜೊತೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಇತರ ರಾಜ್ಯಗಳ ಕಲಾಸಕ್ತರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಶೇಷ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಈ ಪ್ರದರ್ಶನದ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ, ಜಾಗತಿಕ ಮಟ್ಟದ ಕಲಾ ಪ್ರದರ್ಶನಗಳನ್ನು ಆಯೋಜಿಸಬಲ್ಲ ಸಾಂಸ್ಕೃತಿಕ ನಗರವಾಗಿ ಬೆಂಗಳೂರಿನ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಭಾರತ ಮತ್ತು ಇಟಲಿ ನಡುವೆ ಸಾಂಸ್ಕೃತಿಕ ಬಾಂಧವ್ಯ
ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ.ಜಾರ್ಜ್ ಅವರು, ವಿಶ್ವದ ಅತ್ಯಂತ ಪ್ರತಿಷ್ಠಿತ ಇಟಾಲಿಯನ್ ಕಲಾಕೃತಿಗಳನ್ನು ಬೆಂಗಳೂರಿಗೆ ತರುವ ಮೂಲಕ ಕರ್ನಾಟಕವನ್ನು ಜಾಗತಿಕ ಸಾಂಸ್ಕೃತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಮತ್ತಷ್ಟು ಬಲವಾಗಿ ಗುರುತಿಸುವ ಉದ್ದೇಶ ನಮ್ಮದು. ಈ ಪ್ರದರ್ಶನವು ಕೇವಲ ಕಲಾ ಪ್ರದರ್ಶನವಲ್ಲ; ಭಾರತ ಮತ್ತು ಇಟಲಿ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ, ಬೆಂಗಳೂರನ್ನು ಜಾಗತಿಕ ಸಾಂಸ್ಕೃತಿಕ ರಾಜಧಾನಿಯಾಗಿ ರೂಪಿಸುವ ನಮ್ಮ ದೃಷ್ಟಿಗೆ ಹೊಸ ಚೈತನ್ಯ ನೀಡಲಿವೆ.
