ಬೆಂಗಳೂರು: ಕಾನೂನು ಕ್ಷೇತ್ರ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜಸೇವೆಗೆ ಅಪಾರ ಅವಕಾಶಗಳನ್ನು ಒದಗಿಸುವ ಮಹತ್ವದ ವೃತ್ತಿಯಾಗಿದೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದ್ದಾರೆ.
ಜಯನಗರದ ಎಂ.ಕೆ. ಪಾಂಡುರಂಗ ಶೆಟ್ಟಿ ಸ್ಮಾರಕ ಆರ್.ವಿ. ಕಾನೂನು ಅಧ್ಯಯನ ಸಂಸ್ಥೆಯಿಂದ 2021–26ನೇ ಬ್ಯಾಚ್‌ನ ನಾಲ್ಕನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಕಾನೂನು ವೃತ್ತಿಯನ್ನು ಸಮರ್ಪಣೆ, ಪ್ರಾಮಾಣಿಕತೆ ಹಾಗೂ ಗಂಭೀರತೆಯಿಂದ ಸ್ವೀಕರಿಸಬೇಕು. ಕಾನೂನು ವೃತ್ತಿ ಅತ್ಯಂತ ವಿಶಾಲವಾಗಿದ್ದು, ಹಲವು ಆಯಾಮಗಳನ್ನು ಒಳಗೊಂಡಿದೆ ಎಂದರು.
ಒಟ್ಟು 110 ಕಾನೂನು ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಹಾಗೂ ಸಾಧನಾ ಸ್ಮರಣಿಕೆಗಳನ್ನು ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಪದವೀಧರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೋಧಕ ವೃಂದ, ಸಿಬ್ಬಂದಿ, ಪೋಷಕರು ಹಾಗೂ ಹಿತೈಷಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಆರ್‌ಎಸ್‌ಎಸ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಂ.ಪಿ. ಶ್ಯಾಮ್, ಉಪಾಧ್ಯಕ್ಷ ಚಂದ್ರಶೇಖರ ರಾಜು, ಆಡಳಿತ ಮಂಡಳಿ ಅಧ್ಯಕ್ಷರಾದ ಎನ್. ಆರ್. ನಂದೀಶ್, ಸದಸ್ಯರಾದ ಸಿಎ ಡಾ. ವಿಷ್ಣು ಭರತ್ ಆಲಂಪಳ್ಳಿ ಹಾಗೂ ಟ್ರಸ್ಟಿ ಡಾ. ಎಂ. ಎಸ್. ಪ್ರಕಾಶ್, ಪ್ರಾಂಶುಪಾಲರಾದ ಪ್ರೊ. ಡಾ. ಅಂಜಿನಾ ರೆಡ್ಡಿ ಕೆ. ಆರ್. ಮತ್ತಿತರರು ಭಾಗವಹಿಸಿದ್ದರು.
