ಸಮಗ್ರ ಸುದ್ದಿ

ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಹಾಗೂ ನೀರಿನ ಮಿತವ್ಯಯ ಉತ್ತೇಜನಕ್ಕೆ ಜಲಮಂಡಳಿಯಿಂದ ಆದೇಶ |ಎಲ್‌ನಿನೋ ಹಿನ್ನೆಲೆ: ನೀರಿನ ಸಂರಕ್ಷಣೆಗೆ ನಾಗರಿಕರ ಸಹಕಾರ ಅಗತ್ಯ – ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ

Share

ಬೆಂಗಳೂರು : ಎಲ್‌ನಿನೋ ಪರಿಣಾಮದಿಂದ ಮುಂಗಾರು ಮಳೆಯ ಪ್ರಮಾಣದಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ನಗರದ ಕುಡಿಯುವ ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ನೀರಿನ ಸಮರ್ಪಕ ನಿರ್ವಹಣೆ ಮತ್ತು ಮಿತವ್ಯಯವನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮೂರು ಮಹತ್ವದ ಆದೇಶಗಳನ್ನು ಜಾರಿಗೊಳಿಸಿದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ಮಂಜುಳ ತಿಳಿಸಿದ್ದಾರೆ.

ನಗರದಲ್ಲಿ ಪ್ರತಿಯೊಂದು ಹನಿ ನೀರನ್ನು ಜವಾಬ್ದಾರಿಯುತವಾಗಿ ಬಳಸುವ ಪದ್ದತಿಯನ್ನು ಬೆಳೆಸುವುದು, ಕುಡಿಯುವ ನೀರಿನ ಅನಗತ್ಯ ಬಳಕೆಯನ್ನು ತಡೆಯುವುದು ಹಾಗೂ ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಏರೇಟರ್ ಅಳವಡಿಕೆ ಕಡ್ಡಾಯ:

ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಕೈಗಾರಿಕೆಗಳು ಸೇರಿದಂತೆ ನೀರು ಬಳಸುವ ಎಲ್ಲಾ ಕಟ್ಟಡಗಳಲ್ಲಿ Flow Restrictor/Aerator ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದ್ದು, ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಕುಡಿಯುವ ನೀರಿನ ದುರ್ಬಳಕೆಗೆ ನಿರ್ಬಂಧ:

ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಕುಡಿಯುವ ನೀರಲ್ಲದ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇಂತಹ ಅಗತ್ಯಗಳಿಗೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ (Treated Water) ಬಳಸಬೇಕು ಎಂದು ಸೂಚಿಸಲಾಗಿದೆ.

ಈಜುಕೊಳಗಳಿಗೆ ಕುಡಿಯುವ ನೀರಿನ ಬಳಕೆ ನಿಷೇಧ

ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದನ್ನು ನಿಷೇಧಿಸಲಾಗಿದೆ. ಈಜುಕೊಳಗಳಿಗೆ ಅಗತ್ಯವಿರುವ ನೀರನ್ನು ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸುವಂತೆ ಸೂಚಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ದಂಡ

ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ–1964ರ ಅನ್ವಯ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇಕಡ 50 ರವರೆಗೆ ಕಡಿತಗೊಳಿಸಿ ₹5,000 ದಂಡ ವಿಧಿಸಲಾಗುವುದು. ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ ₹500 ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಈ ಕುರಿತು ಪ್ರತಿಕ್ರಿಯಿಸಿರುವ ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಅವರು, ಕುಡಿಯುವ ನೀರು ಪ್ರತಿಯೊಬ್ಬರಿಗೂ ಸೇರಿದ ಅಮೂಲ್ಯ ನೈಸರ್ಗಿಕ ಸಂಪತ್ತು. ಅದರ ಸಂರಕ್ಷಣೆ ಕೇ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂದಿನ ಮಿತವ್ಯಯವೇ ನಾಳಿನ ನೀರಿನ ಭದ್ರತೆಗೆ ಭದ್ರ ಬುನಾದಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಜವಾಬ್ದಾರಿಯುತವಾಗಿ ಬಳಸಿ, ಏರೇಟರ್ ಅಳವಡಿಸಿ, ಕುಡಿಯುವ ನೀರಿನ ದುರ್ಬಳಕೆಯನ್ನು ತಪ್ಪಿಸಿ ಜಲ ಸಂರಕ್ಷಣೆಯ ಜನಾಂದೋಲನಕ್ಕೆ ಕೈಜೋಡಿಸಬೇಕು. ನಾಗರಿಕರ ಸಹಭಾಗಿತ್ವದಿಂದಲೇ ಬೆಂಗಳೂರಿನ ನೀರಿನ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಸಾಧ್ಯ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಲಮಂಡಳಿ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.


Share

You cannot copy content of this page