ಸಮಗ್ರ ಸುದ್ದಿ

ವೃತ್ತಿ ತೆರಿಗೆ ಪಾವತಿದಾರರಿಗೆ ಆನ್‍ಲೈನ್ ಮೂಲಕವೇ ನೋಟಿಸ್ ಜಾರಿ ಮತ್ತು ಉತ್ತರ ಸಲ್ಲಿಕೆಗೆ ಅವಕಾಶ

Share

ಬೆಂಗಳೂರು : ರಾಜ್ಯದ ವೃತ್ತಿ ತೆರಿಗೆ ಪಾವತಿದಾರರಿಗೆ ಮತ್ತಷ್ಟು ಸುಲಭ, ವೇಗ ಹಾಗೂ ಪರಿಣಾಮಕಾರಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ಇಲಾಖೆಯು ತನ್ನ ಅಧಿಕೃತ ವೃತ್ತಿತೆರಿಗೆ ಜಾಲತಾಣವನ್ನು  https://ptax.karnataka.gov.in/ 2026ರ ಜುಲೈ 1ರಿಂದ ಜಾರಿಗೆ ಬರುವಂತೆ ನವೀಕರಿಸಿದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರಾದ ವಿಪುಲ್ ಬನ್ಸಾಲ್ ಅವರು ತಿಳಿಸಿದ್ದಾರೆ.

ಕರ್ನಾಟಕ ವೃತ್ತಿಗಳು, ವ್ಯಾಪಾರಗಳು, ಆಜೀವಿಕೆಗಳು ಮತ್ತು ಉದ್ಯೋಗಗಳ ಮೇಲಿನ ತೆರಿಗೆ ನಿಯಮಗಳು 1976ರ ನಿಯಮ 27ರ ಅನ್ವಯ, ಇಲಾಖೆಯಿಂದ ಹೊರಡಿಸಲಾಗುವ ಎಲ್ಲಾ ನೋಟಿಸ್‍ಗಳು, ನಿರ್ಧಾರಗಳು, ಸಮನ್ಸ್‍ಗಳು, ಆದೇಶಗಳು ಹಾಗೂ ಇತರೆ ಅಧಿಕೃತ ಸಂವಹನಗಳನ್ನು ಇನ್ನು ಮುಂದೆ ವೃತ್ತಿತೆರಿಗೆ ಜಾಲತಾಣದ (ಆನ್‍ಲೈನ್) ಮೂಲಕವೇ ನೇರವಾಗಿ ರವಾನಿಸಲಾಗುವುದು.

ದಾಖಲಾದ ವೃತ್ತಿತೆರಿಗೆ ಪಾವತಿದಾರರು ಇಲಾಖೆಯ ನೋಟಿಸ್‍ಗಳಿಗೆ ತಮ್ಮ ಉತ್ತರಗಳು, ಸಮಜಾಯಿಷಿಗಳು, ಆಕ್ಷೇಪಣೆಗಳು ಹಾಗೂ ಇತರೆ ಯಾವುದೇ ಪ್ರತಿಕ್ರಿಯೆಗಳನ್ನು ಕಚೇರಿಗೆ ಅಲೆದಾಟ ತಪ್ಪಿಸಲು ಜಾಲತಾಣದ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ದಾಖಲಾದ ವೃತ್ತಿತೆರಿಗೆ ಪಾವತಿದಾರರು ಇಲಾಖೆಯ ಪೋರ್ಟಲ್‍ನಲ್ಲಿ ಬರುವ ಸಂವಹನಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಆನ್‍ಲೈನ್ ಸೌಲಭ್ಯದ ಸದುಪಯೋಗವನ್ನು ಪಡೆದುಕೊಂಡು, ಕಾಯ್ದೆ ಹಾಗೂ ನಿಯಮಗಳನ್ವಯ ಸಕಾಲದಲ್ಲಿ ಪ್ರತ್ಯುತ್ತರ ನೀಡಿ ಸಹಕರಿಸಬೇಕಾಗಿ ಕೋರಲಾಗಿದೆ.

ಈ ಹೊಸ ವ್ಯವಸ್ಥೆ ಹಾಗೂ ವೃತ್ತಿ ತೆರಿಗೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ವೃತ್ತಿತೆರಿಗೆ ಕಚೇರಿಯನ್ನು ಅಥವಾ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1800-425-6300 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page