ಬೆಂಗಳೂರು: ಬೇರೆ ಬೇರೆ ಕಾರಣ ಹೇಳಿ ಜಿಬಿಎ ಹಾಗೂ ಇತರೆ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಇನ್ನೂ ಮುಂದೂಡಬಾರದು. ಆದಷ್ಟು ಬೇಗ ಚುನಾವಣೆಯನ್ನು ಸರ್ಕಾರ ನಡೆಸಬೇಕು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಎಸ್‍ಐಆರ್ ನಡೆಯುತ್ತಿದೆ. ಅದು ಸದ್ಯದಲ್ಲೇ ಮುಗಿಯಲಿದೆ. ಕೂಡಲೇ ಜಿಬಿಎ ಚುನಾವಣೆ ನಡೆಸಬೇಕು ಎಂದರು.
ಸದ್ಯ ಜಿಬಿಎ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳು ಇಲ್ಲ. ಆದ್ದರಿಂದ ಎಲ್ಲದಕ್ಕೂ ಶಾಸಕರನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಇನ್ನಾದರೂ ಕಾರಣ ಹೇಳದೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಬಿಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಹಲವು ಕಾರಣ ನೀಡಿದೆ. ಸುಪ್ರೀಂಕೋರ್ಟ್ ಸಹ ಮುಂದೂಡಲು ಅವಕಾಶ ನೀಡಿದೆ. ಅದರೆ ಇನ್ನು ಮುಂದೆ ಮುಂದೂಡಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಈ ತಿಂಗಳ ಒಳಗೆ ಚುನಾವಣೆ ದಿನಾಂಕ ನಿಶ್ಚಯವಾದರೆ ಒಳ್ಳೆಯದು ಎಂದು ತಿಳಿಸಿದರು.
ಸಮನ್ವಯ ಸಮಿತಿ ಬೇಕು:
ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ಬೇಕು ಎಂಬ ಬೇಡಿಕೆ ಸರಿ ಇದೆ. ಜಿಬಿಎನಲ್ಲಿ ಜೆಡಿಎಸ್‍ಗೂ ಸ್ಥಾನ ನೀಡಬೇಕು. ಎಲ್ಲಿ ಸ್ಥಾನಗಳನ್ನು ಕೊಡಬೇಕು, ಅಭ್ಯರ್ಥಿಗಳು ಯಾರು ಎಂಬುದನ್ನು ತೀರ್ಮಾನ ಮಾಡಲು ಎರಡೂ ಪಕ್ಷಗಳ ನಡುವೆ ಸಮನ್ವಯ ಸಮಿತಿ ಇರಬೇಕು. ಜಿಬಿಎ ಸಂಬಂಧ ಸಮನ್ವಯ ಸಮಿತಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಮಿತಿ ಶೀಘ್ರದಲ್ಲೇ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಬಿಎ ಚುನಾವಣೆಗೆ ತಯಾರಿ:
ಜಿಬಿಎ ಚುನಾವಣೆ ಸಂಬಂಧ ಪ್ರಣಾಳಿಕೆ ಮಾಡಲು ಒಂದು ತಂಡ ರಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಚೆಗೆ ನಡೆದ ಸಭೆಯಲ್ಲಿ ಕೆಲವರಿಗೆ ಜವಾಬ್ದಾರಿ ನೀಡಲಾಗಿದೆ. ಶಾಸಕ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ಆಗಬಹುದು. ಈಗಾಗಲೇ ಪ್ರತ್ಯೇಕ ಜಿಬಿಎಗಳಿಗೆ ಆಯಾ ಪ್ರದೇಶಕ್ಕೆ ಅನುಗುಣಕ್ಕೆ ಸರಿಯಾದ ಪ್ರತ್ಯೇಕ ಪ್ರಣಾಳಿಕೆ ಮಾಡುವ ಉದ್ದೇಶ ಇದೆ. ಜಿಬಿಎಗಳಿಗೆ ಅಭ್ಯರ್ಥಿಗಳು ಮತ್ತು ಸಂಘಟನೆಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಪಕ್ಷದ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಬರಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡಲಿದ್ದಾರೆ ಎಂದರು.
ಭಿನ್ನಾಭಿಪ್ರಾಯ ಮರೆತು ಹೋಗುತ್ತೇವೆ:
ಪಕ್ಷದ ಕೆಲವರ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಮುಂದೆ ಬರುವ ಸ್ಥಳೀಯ ಸಂಸ್ಥೆ ಚುನಾವಣೆ ಇರಬಹುದು, ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ನಾಲ್ಕು ಶಾಸಕರು ಗೆಲ್ಲಲು ಸಂಸದ ಡಾ. ಕೆ ಸುಧಾಕರ್ ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಚುನಾವಣೆಗಳಿಗೆ ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಹಿಂದೆ ಅಚಾನಕ್ ಆಗಿ ಮಾತನಾಡಿರಬಹುದು. ನಮ್ಮದೂ ತಪ್ಪು ಇರಬಹುದು. ಅವೆಲ್ಲ ಮರೆತು ಮುಂದೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಜೊತೆಯಲ್ಲಿದ್ದು ಪಕ್ಷ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.
ಎಸ್‍ಐಆರ್ ಗೊಂದಲ ಇಲ್ಲ:
ಯಲಹಂಕ ಕ್ಷೇತ್ರದಲ್ಲಿ ಎಸ್‍ಐಆರ್ ಗೊಂದಲ ಇಲ್ಲ. ಎಲ್ಲ ಸುಸೂತ್ರವಾಗಿ ನಡೆಯುತ್ತಿದೆ. ಬಿಎಲ್‍ಒಗಳ ಜೊತೆಗೆ ಬಿಎಲ್‍ಎಗಳು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅರ್ಜಿ ನೀಡಲು ಮನೆಮನೆಗೆ ಹೋಗಲು ಹೇಳಿದ್ದೇವೆ ಎಂದು ಹೇಳಿದರು.
