ಬೆಂಗಳೂರು: ನಮ್ಮ ಭಾರತದ ಒಬ್ಬ ಅಪ್ರತಿಮ ಗಾಯಕಿ, ಗಾನಕೋಗಿಲೆ ಎಸ್ ಜಾನಕಿ ಅವರ ಹೆಸರು ಅಜರಾಮರವಾಗಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು. ಇದರ ಬಗ್ಗೆ ಚಿತ್ರರಂಗದ ಪ್ರಮುಖರ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಐವತ್ತು ವರ್ಷಗಳ ಕಾಲ ನಮ್ಮ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದವರು. ಎಲ್ಲಾ ಭಾಷೆಯಲ್ಲೂ ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದು ಇತಿಹಾಸ ಪುಟಕ್ಕೆ ಸೇರಿದ್ದಾರೆ. 33 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾವು ಕೂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದೇವೆ. ನಲವತ್ತೆಂಟು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದ ಏಕೈಕ ಗಾಯಕಿ ಎಂದು ಹೇಳಿದರು.
ನನಗೆ ಅಚ್ಚರಿಯಾಯಿತು:
“ಜಾನಕಿ ಅಮ್ಮನವರ ಕುಟುಂಬದವರ ಜೊತೆ ದೂರವಾಣಿ ಮೂಲಕ ನಾನು ಮಾತನಾಡಿದೆ. ನನಗೆ ಅಚ್ಚರಿ ತಂದ ವಿಚಾರ ಎಂದರೆ ಕಳೆದ ಹಲವಾರು ವರ್ಷದಿಂದ ಮೈಸೂರಿನಲ್ಲಿ ಅವರು ವಾಸವಾಗಿದ್ದರು. ಅವರ ಕುಟುಂಬದವರಿಗೆ ಕೇಳಿದೆ, ಚೆನ್ನೈ ಅಥವಾ ಹೈದರಾಬಾದ್ ಗೆ ಹೋಗಬೇಕು ಎಂದರೆ ಏರ್ ಲಿಫ್ಟ್ ಮಾಡಿಕೊಡುವೆ ಎಂದು ಹೇಳಿದೆ. ಮೈಸೂರಿನಲ್ಲೇ ಇರಬೇಕು ಎಂಬುದು ನಮ್ಮ ಅಜ್ಜಿ ಕೊನೆ ಆಸೆ ಎಂದು ತಿಳಿಸಿದರು ಎಂದರು.
ಜಾನಕಿ ಅವರು ಬಹಳ ಸರಳ ಜೀವಿ. ಲತಾ ಮಂಗೇಶ್ಕರ್ ಯಾವ ರೀತಿ ಅವರ ಸರಳತೆಯನ್ನು ಕಾಪಾಡಿಕೊಂಡು ಬಂದಿದ್ದರೋ ಆ ರೀತಿ ಬದುಕಿದವರು. ನಮ್ಮ ಭಾಷೆ, ನಮ್ಮ ನೆಲದ ಮೇಲೆ, ಮೈಸೂರು ಮೇಲೆ ವಿಶೇಷ ಪ್ರೀತಿ ಇಟ್ಟಿದ್ದರು. ನಮ್ಮೆಲ್ಲರಿಗೂ ಕೂಡ ಅತಿ ಹೆಚ್ಚು ಗೌರವವನ್ನು ತಂದಿದೆ. ಅವರು ಮೊದಲನೇ ಹಾಗೂ ಕೊನೆಯ ಹಾಡು ಹಾಡಿದ್ದು ಮೈಸೂರಿನಲ್ಲೇ. ಇದು ಕೂಡ ಬಹಳ ವಿಶೇಷವಾದಂತಹ ವಿಚಾರ ಎಂದರು.
ಅವರ ಪ್ರೀತಿಗೆ ಗೌರವ ಕೊಟ್ಟು ನಾನು ನಮ್ಮ ಜಿಲ್ಲಾಡಳಿತಕ್ಕೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಮಾರ್ಗದರ್ಶನ ನೀಡಿದ್ದೇನೆ. ಅವರಿಗೆ ಯಾವ ರೀತಿ ಅಂತಿಮ ಗೌರವವನ್ನು ಸಲ್ಲಿಸಬೇಕೋ ಆ ಕೆಲಸವನ್ನು ಸರ್ಕಾರ ಮಾಡಲಿದೆ. ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಮೈಸೂರಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಯತೀಂದ್ರ ಅವರು ಕಲಬುರ್ಗಿ ಪ್ರವಾಸ ಹೋಗುವವರಿದ್ದರು. ಅವರಿಗೆ ನಾನು ಮನವಿ ಮಾಡಿ ಅಂತಿಮ ಗೌರವದ ವ್ಯವಸ್ಥೆ ವೇಳೆ ನೀವು ಇರಬೇಕು ಎಂದು ಮನವಿ ಮಾಡಿದೆ ಎಂದರು.
