ಸಮಗ್ರ ಸುದ್ದಿ

ಸಕಲ ಸರ್ಕಾರಿ ಗೌರವದೊಂದಿಗೆ ಎಸ್.ಜಾನಕಿ ಅಂತ್ಯಕ್ರಿಯೆ

Share

ಮೈಸೂರು: ಅನಾರೋಗ್ಯದಿಂದ ನಿನ್ನೆ ನಿಧನರಾದ ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಎಚ್.ಡಿ. ಕೋಟೆ ತಾಲೂಕಿನ ಕಣಿಯನ ಹುಂಡಿ ತೋಟದಲ್ಲಿ ನೆರವೇರಿತು.

ಎಸ್. ಜಾನಕಿ ಅವರ ಮೊಮ್ಮಗಳು ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿದರು. ಭಾರತೀಯ ಚಿತ್ರರಂಗದಲ್ಲಿ 6 ದಶಕಗಳ ಕಾಲ 20ಕ್ಕೂ ಅಧಿಕ ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿಯಾಗಿದ್ದ ಸ್ವರ ಸಾಮ್ರಾಜ್ಞಿ, ಎಸ್. ಜಾನಕಿ ಅವರು ಇನ್ನು ನೆನಪು ಮಾತ್ರ.

ಅಂತಿಮ ಸಂಸ್ಕಾರಕ್ಕೂ ಮುನ್ನ ಎಸ್. ಜಾನಕಿ ಅವರ ಪಾರ್ಥೀವ ಶರೀರಕ್ಕೆ, ಚಿತ್ರರಂಗದ ಹಲವು ಗಣ್ಯರು, ಕಲಾವಿದರು, ಗಾಯಕರು ಅಂತಿಮ ಗೌರವ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಚಿತ್ರರಂಗದ ಅನೇಕ ಗಣ್ಯರು, ಸಾರ್ವಜನಿಕರು, ಜನಪ್ರತಿನಿಧಿಗಳು ಎಸ್. ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಸಂಗೀತ ನಿರ್ದೇಶಕ ಡಾ. ಹಂಸಲೇಖ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ ಎಸ್. ಜಾನಕಿ ಅವರು ಪರಿಪೂರ್ಣ ಗಾಯನ, ಸಂಪೂರ್ಣ ಜೀವನ ಎನ್ನುವ ವ್ಯಕ್ತಿತ್ವ ಹೊಂದಿದ್ದರು. ಎಸ್. ಜಾನಕಿ ಅವರು ಕನ್ನಡ ನಾಡಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮುಂದಿನ ಜನ್ಮದಲ್ಲಿ ಕರುನಾಡಿನಲ್ಲಿ ಹುಟ್ಟುವುದಾಗಿ ಹೇಳಿದ್ದರು. ಈ ಇಬ್ಬರೂ, ಭಾರತ ಕಂಡ ಅತ್ಯುತ್ತಮ ಶ್ರೇಷ್ಠ ಗಾಯಕರು. ಜಾನಕಿ ಅವರ ಶಿಷ್ಯನ ಜಮೀನಿನಲ್ಲಿ, ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ಆ ಸ್ಥಳವನ್ನು ಧ್ಯಾನ ಮಂದಿರ ಮಾಡಲು, ಸಂಗೀತಗಾರರ ಸಂಘ ನಿರ್ಧರಿಸಿದೆ. ಇದಕ್ಕೆ ಜಮೀನಿನ ಮಾಲೀಕರು, ಸಾರ್ವಜನಿಕರು ಹಾಗೂ ಸರ್ಕಾರದ ಸಹಕಾರ ಅಗತ್ಯ ಎಂದು ಹೇಳಿದರು.

​ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರುಗಳಾದ ಅನಿಲ್ ಚಿಕ್ಕಮಾದು, ಟಿ.ಎಸ್. ಶ್ರೀವತ್ಸ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ನಟಿಯರಾದ ಜಯಮಾಲ, ಭಾರತಿ ವಿಷ್ಣುವರ್ಧನ್, ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.

​ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಗಣ್ಯರು ಹಾಗೂ ಸಹಸ್ರಾರು ಅಭಿಮಾನಿಗಳು ಉಪಸ್ಥಿತರಿದ್ದು, ಅಗಲಿದ ಗಾನಕೋಗಿಲೆಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.


Share

You cannot copy content of this page