ಸಮಗ್ರ ಸುದ್ದಿ

ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ; ಜಿಲ್ಲಾಡಳಿತದಿಂದ ಸಕಲ ಸಿದ್ದತೆ

Share

ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಆರಂಭವಾಗಲಿದೆ. ಒಟ್ಟು 10 ದಿನಗಳ ಅಧಿವೇಶನದಲ್ಲಿ 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ.

ದ್ವೇಷ ಭಾಷಣ ತಡೆಗೆ ಹೊಸ ಕಾನೂನು, ಸಾಮಾಜಿಕ ಬಹಿಷ್ಕಾರ ಹೇರುವುದನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಎರಡು ಪ್ರಮುಖ ವಿಧೇಯಕಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ನಾಯಕತ್ವ ಗೊಂದಲ, ಪಕ್ಷದೊಳಗಿನ ಭಿನ್ನಮತ, ಶಾಸಕರ ದೆಹಲಿ ಯಾತ್ರೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಬೆಳಗಾವಿ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸುವರ್ಣಸೌಧದಲ್ಲಿ ಮುಖ್ಯಮಂತ್ರಿ, ಸಚಿವರು, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಕಚೇರಿಗಳ ಸ್ವಚ್ಛತೆ, ಪೀಠೋಪಕರಣ ಅಳವಡಿಕೆ, ಕುಡಿಯುವ ನೀರು, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಶೌಚಾಲಯ, ದೀಪದ ವ್ಯವಸ್ಥೆ, ಸೇರಿದಂತೆ ತಾಂತ್ರಿಕ ವ್ಯವಸ್ಥೆಗೆ ಕ್ರಮವಹಿಸಿದೆ.

ಭದ್ರತಾ ದೃಷ್ಟಿಯಿಂದ ಸುವರ್ಣಸೌಧದ ಒಳಗೂ ಮತ್ತು ಹೊರಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುಮಾರು 8 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 20 ದಿನಗಳ ಕಾಲ ಸುವರ್ಣ ಸೌಧದ ಸುತ್ತ ಮೂರು ಕಿಲೋ ಮೀಟರ್ ಅಂತರದ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅನುಮತಿ ಪಡೆದವರಿಗೆ ಮಾತ್ರ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಅಧಿವೇಶನ ಸಂದರ್ಭದಲ್ಲಿ ಸಭಾಧ್ಯಕ್ಷರ ಸೂಚನೆಗೆ ಮೇರೆಗೆ ಈ ಬಾರಿ 48, 72 ಉದ್ದಳತೆಯ ಬೃಹತ್ ಗಾತ್ರದ ರಾಷ್ಟ್ರ ಧ್ವಜದ ಪ್ರದರ್ಶನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.


Share

You cannot copy content of this page