ಸಮಗ್ರ ಸುದ್ದಿ

ವಾರಕ್ಕೊದೊಂದು ವಾರ್ಡ್ ಗೆ ಭೇಟಿ ನೀಡಿ ನಿವಾಸಿಗಳ ಅಹವಾಲುಗಳ ಆಲಿಕೆ: ಕೆ.ಎನ್. ರಮೇಶ್

Share


ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರಕ್ಕೊಂದು ವಾರ್ಡ್ ಗೆ ಭೇಟಿ ನೀಡಿ ನಿವಾಸಿಗಳ ಅಹವಾಲುಗಳ ಆಲಿಸಲಾಗುವುದು ಎಂದು ಆಯುಕ್ತರಾದ ಕೆ.ಎನ್ ರಮೇಶ್ ಅವರು ತಿಳಿಸಿದರು.

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದ ಬಳಿಕ ಅವರು ಮಾತನಾಡಿದರು.

ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್ ಗಳು‌ ಬರಲಿದ್ದು, ವಾರಕ್ಕೆ ಒಂದು ವಾರ್ಡ್ ಗೆ ತೆರಳಿ ನಾಗರಿಕರ ಸಮಸ್ಯೆಗಳನ್ನು ಖುದ್ದು ಆಲಿಸಿ, ಸ್ಥಳಿಯವಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು.

ಅದರಂತೆ, ನಾಗರಿಕರ ಅಹವಾಲುಗಳಿಗೆ ವಾರ್ಡ್ ಹಂತದಲ್ಲಿಯೇ ಪರಿಹಾರ ಸೂಚಿಸಲು ಅಧಿಕಾರಿಗಳ ನಿಯೋಗದೊಂದಿಗೆ ಪ್ರತಿ ವಾರ ಖುದ್ದಾಗಿ ವಾರಕ್ಕೊಮ್ಮೆ ಒಂದೊಂದು ವಾರ್ಡ್ ಗೆ ಭೇಟಿ ನೀಡಿ ನಿವಾಸಿಗಳ ಅಹವಾಲುಗಳನ್ನು ಆಲಿಸಲಾಗುವುದೆಂದು ಭರವಸೆ ನೀಡಿದರು.

ನಾಗರಿಕರು ಮಳೆ ನೀರುಗಾಲುವೆ ಒತ್ತುವರಿ, ಪಾದಚಾರಿ ಮಾರ್ಗ ಒತ್ತುವರಿ, ಬೀದಿ ದೀಪ ಸಮಸ್ಯೆ, ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ರಸ್ತೆ ಗುಂಡಿ, ಕಾನೂನಿಗೆ ವ್ಯತಿರಿಕ್ತವಾದ ಕಟ್ಟಡಗಳ ನಿರ್ಮಾಣ, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು, ಸಾರ್ವಜನಿಕ ಶೌಚಾಲಯ ನಿರ್ವಹಣೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಹೇಳಿಕೊಂಡರು.

ನಾಗರಿಕರಿಂದ ಸಮಸ್ಯೆಗಳನ್ನು ಆಲಿಸಿದ ನಂತರ, ಕೆಲವೊಂದು ಸಮಸ್ಯೆಗಳಿಗೆ ಮೈಕ್ರೋ ಹಂತದಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಇದಕ್ಕೆ ನಾಗರಿಕರ ಸಹಕಾರ ಕೂಡಾ ಅಗತ್ಯವಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಯಲಚೇನಹಳ್ಳಿ, ಕೋಣನಕುಂಟೆ, ಜೆಪಿ ನಗರ, ಬಿಟಿಎಂ ಲೇಔಟ್, ಹೆಚ್.ಎಸ್.ಆರ್. ಲೇಔಟ್, ಪುಟ್ಟೇನಹಳ್ಳಿ ಹಾಗೂ ಇನ್ನಿತರ ಪ್ರದೇಶಗಳ ಅಪಾರ್ಟ್ ಮೆಂಟ್ ಅಸೋಸಿಯೇಷನ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.


Share

You cannot copy content of this page