ಬೆಂಗಳೂರು: ರಾಜ್ಯ ಸರ್ಕಾರ ಎಚ್ಎಂಟಿಗೆ 1961ರಲ್ಲಿ ಬೆಂಗಳೂರು ಪೀಣ್ಯ, ಜಾಲಹಳ್ಳಿ, ಮ್ಯಾಕಲ ಚನ್ನೇನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿಕೊಟ್ಟಿರುವ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ, ಮರುವಶಪಡಿಸಿಕೊಳ್ಳಲಾಗುವುದು ಎಂಬ ಷರತ್ತು ಹಾಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ 1961 ಸೆಪ್ಟೆಂಬರ್ 28ರ ಮೈಸೂರು ಗೆಜೆಟ್ ನಲ್ಲಿ ಸ್ಪಷ್ಟ ಉಲ್ಲೇಖವಿದೆ ಎಂದು ರಾಜ್ಯಪತ್ರದ ಪ್ರತಿ ಪ್ರದರ್ಶಿಸಿದರು.
1913ರ ಭಾರತೀಯ ಕಂಪನಿಗಳ ಕಾಯ್ದೆ ಅಡಿ ನೋಂದಣಿಯಾದ ಎಚ್.ಎಂ.ಟಿ.ಗೆ ಅಂದಿನ ಮೈಸೂರು ರಾಜ್ಯ ಸರ್ಕಾರ ಜಾಲಹಳ್ಳಿ, ಪೀಣ್ಯ ಹಾಗೂ ಮ್ಯಾಕಲ ಚನ್ನೇನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿ ಹಸ್ತಾಂತರಿಸುವಾಗ ಒಪ್ಪಂದವಾಗಿದ್ದು, ಎಚ್ಎಂಟಿ ಕೈಗಾರಿಕಾ ಉದ್ದೇಶಕ್ಕೆ ಮಾತ್ರವೇ ಈ ಭೂಮಿ ಬಳಸಬೇಕು, ಷರತ್ತು ಉಲ್ಲಂಘಿಸಿದರೆ ಮರಳಿ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬಹುದು ಎಂದಿದೆ. ಪಟ್ಟಾ ಭೂಮಿಗೆ ಈ ಷರತ್ತು ಇರುವಾಗ ಅರಣ್ಯ ಭೂಮಿಗೆ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ತಾವು ಕಳೆದ 11ರಂದು ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಎಚ್.ಎಂ.ಟಿ.ಯಲ್ಲಿ ಇನ್ನೂ ಅರಣ್ಯ ಸ್ವರೂಪ ಇದೆ. ಇಲ್ಲಿನ ಕಟ್ಟಡಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ನಂತಹ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಇದರ ಪರಿಶೀಲನೆ ಮಾಡಲಿ ಎಂದು ತಿಳಿಸಿದ್ದೆ. ಇಂದು ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಇದನ್ನು ಸ್ವಾಗತಿಸುತ್ತೇನೆ. ಅವರು ಹಸಿರು ಹೊದಿಕೆ ಪ್ರದೇಶ ನೋಡಿ ಬರಬೇಕು ಎಂದರು.
ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದಾರೆ. ರಾಜ್ಯದ 7 ಕೋಟಿ ಜನರ ಆಸ್ತಿಯಾದ ಈ ಬೆಲೆಬಾಳುವ ಪ್ರದೇಶವನ್ನು ಬೆಂಗಳೂರು ಉತ್ತರದ ನಿವಾಸಿಗಳಿಗೆ ಉತ್ತಮ ಶ್ವಾಸತಾಣವಾಗಿ ಉಳಿಸಬೇಕು. ಭೂಮಿಯನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದೂ ತಿಳಿಸಿದರು.
