ಸಮಗ್ರ ಸುದ್ದಿ

ಬರ ಪರಿಸ್ಥಿತಿ ಸಮರ್ಥ ನಿರ್ವಹಣೆ ; ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ | ಎನ್‌ಡಿಆರ್‌ಎಫ್‌ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪತ್ರ

Share

ಬೆಂಗಳೂರು: ಸೂಪರ್ ಎಲ್‌ನೀನೋ ಹವಾಮಾನ ವೈಪರೀತ್ಯ ಭಾರತದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈ ತಿಂಗಳಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದೆ. ಅಲ್ಪಸ್ವಲ್ಪ ಮಳೆಯಿಂದ ರೈತರು ಬೀಜ ಬಿತ್ತನೆ ಮಾಡಿದ್ದು, ಈಗ ನಷ್ಟಕ್ಕೆ ಒಳಗಾಗಿದ್ದಾರೆ. 245 ತಾಲ್ಲೂಕುಗಳ ಪೈಕಿ 15 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. 157 ತಾಲ್ಲೂಕುಗಳಲ್ಲಿ ಕೊರತೆ, 14 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯದ ಬರ ಪರಿಸ್ಥಿತಿಯನ್ನು ಮಾಧ್ಯಮಕ್ಕೆ ವಿವರಿಸಿದ ಅವರು, ರಾಜ್ಯದ ಹಲವು ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಬೆಳಗಾವಿ ವಿಭಾಗದಲ್ಲಿ ಎರಡು ಸಭೆಗಳು, ಕಲಬುರಗಿ ವಿಭಾಗದಲ್ಲಿ ಒಂದು ಸಭೆ, ಚಿತ್ರದುರ್ಗದಲ್ಲಿ ಒಂದು ಸಭೆ ಮಾಡಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಗುವುದು. ನಮ್ಮ ಉಳಿದ ಸಚಿವರುಗಳೂ ಸಹ ನಿರಂತರವಾಗಿ ಮಳೆ, ಬೆಳೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು.

ಬರಪರಿಸ್ಥಿತಿಯ ನಿರ್ವಹಣೆಗೆ ನಮ್ಮ ಸರ್ಕಾರ ಎಂದಿಗೂ ಹಿಂದು ಮುಂದು ನೋಡಿಲ್ಲ, ನೋಡುವುದು ಇಲ್ಲ. ಈಗಾಗಲೇ ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ನೀಡಲಾಗಿದೆ. ಈ ಹಣವನ್ನು ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಅಲ್ಲದೇ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ರೂ.329.61 ಕೋಟಿಗಳಷ್ಟು ಹಣ ಇದೆ. ನಿರಂತರವಾಗಿ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್/ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಜೂನ್ 1 ರಿಂದ ಜುಲೈ 15 ರವರೆಗೆ ಶೇ.37 ರಷ್ಟು ಪ್ರಮಾಣದಲ್ಲಿ ಮಳೆಯು ವಾಡಿಕೆಗಿಂತ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗಿದೆ. ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯೇ ಆಗಿಲ್ಲ. ಜುಲೈ ತಿಂಗಳಲ್ಲಿ 10 ಜಿಲ್ಲೆಗಳಲ್ಲಿ ಶೇ.30 ರಿಂದ ಶೇ.60 ರಷ್ಟು ಮಳೆ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.97 ರಷ್ಟು ಮಳೆ ಕೊರತೆಯಾಗಿದೆ. ಕೇವಲ 8 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶ ಬಿತ್ತನೆಗೆ ಯೋಗ್ಯವಾಗಿದೆ. ಒಟ್ಟು 40.68 ಲಕ್ಷ ಹೆಕ್ಟೇರುಗಳಷ್ಟು ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಬೆಳೆಗಳೂ ಕೂಡ ಒಣಗುತ್ತಿವೆ. ಕೆಲವು ಬಿತ್ತನೆ ಮಾಡಿದ ಬೀಜಗಳೂ ಕೂಡ ಹುಟ್ಟಿಲ್ಲ ಎಂದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಜನರು ಗುಳೆ ಹೋಗುವುದನ್ನು ತಪ್ಪಿಸಿ, ಅವರಿಗೆ ಉದ್ಯೋಗ ನೀಡಬೇಕು. ರಾಜ್ಯದ ಕಂದಾಯ ಸಚಿವನಾಗಿ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಈ ವೇಳೆ ತಿಳಿಸಿದರು.

ರಾಜ್ಯದಲ್ಲಿ ನೀರಿನ‌ ಸಂಪನ್ಮೂಲಗಳು ಬತ್ತಿ ಹೋಗಿವೆ‌. ಬರ ಇರುವುದರಿಂದ ತತ್‌ಕ್ಷಣಕ್ಕೆ ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಗಳಲ್ಲಿ ಕೆಲವು ಅಡ್ಡಿಗಳಿವೆ. ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಇಂದು ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಪತ್ರ ಬರೆದು ಎನ್‌ಡಿಆರ್‌ಎಫ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದರು.


Share

You cannot copy content of this page