ಬೆಂಗಳೂರು: ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಪಾದಚಾರಿ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ವಿವಿಧ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಜಾಹೀರಾತು / ನಾಮಫಲಕಗಳು, ಶೀಟ್ಸ್ / ಮೇಲ್ಚಾವಣಿಗಳು, ಮೆಟ್ಟಿಲುಗಳು, ತ್ಯಾಜ್ಯಗಳು ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೋಲಿಸ್ ವಿಭಾಗದ ಅಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೇಂದ್ರ ನಗರ ಪಾಲಿಕೆ ವತಿಯಿಂದ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆ ಕೈಗೊಂಡಿದ್ದು ಯಶಸ್ವಿಯಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಜಿ ಅವರು ತಿಳಿಸಿದ್ದಾರೆ.
ಆರು ವಿಭಾಗಗಳಲ್ಲಿ ಸಮನ್ವಯದೊಂದಿಗೆ ಕಾರ್ಯಾಚರಣೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು ಹಾಗೂ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಲಿಕೆಯ ಶಾಂತಿನಗರ, ಸಿ.ವಿ.ರಾಮನ್ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಶಿವಾಜಿನಗರ ವಿಭಾಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
7 ಪ್ರಮುಖ ರಸ್ತೆಗಳ 7.10 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು
ಈ ಕಾರ್ಯಾಚರಣೆಯಲ್ಲಿ ಒಟ್ಟು 7 ಪ್ರಮುಖ ರಸ್ತೆಗಳ 7.10 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಕಾರ್ಯಾಚರಣೆಯ ವೇಳೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಪೆಟ್ಟಿ ಅಂಗಡಿಗಳು, ತಳ್ಳುವ ಗಾಡಿಗಳು, ಜಾಹೀರಾತು / ನಾಮಫಲಕಗಳು, ಶೀಟ್ಸ್ / ಮೇಲ್ಚಾವಣಿಗಳು, ಮೆಟ್ಟಿಲುಗಳು, ತ್ಯಾಜ್ಯಗಳು ಹಾಗೂ ಇತರೆ ಅಡಚಣೆಗಳನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಗೆ 60 ಕಾರ್ಮಿಕರು, 6 ಜೆಸಿಬಿಗಳು, 12 ಟ್ರ್ಯಾಕ್ಟರ್ ಗಳು ಹಾಗೂ 10 ಟಿಪ್ಪರ್ ಗಳ ಬಳಕೆ
ಸದರಿ ಕಾರ್ಯಾಚರಣೆಯಲ್ಲಿ ಸುಮಾರು 60 ಕಾರ್ಮಿಕರು, 6 ಜೆಸಿಬಿಗಳು, 12 ಟ್ರ್ಯಾಕ್ಟರ್ ಗಳು ಹಾಗೂ 10 ಟಿಪ್ಪರ್ ಗಳನ್ನು ಬಳಸಿಕೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ವಿಭಾಗವಾರು ಪ್ರಮುಖ ಕಾರ್ಯಾಚರಣೆ ವಿವರಗಳು
ಸರ್.ಸಿ.ವಿ.ರಾಮನ್ ನಗರ ವಿಭಾಗ
ವಿಂಡ್ ಟನಲ್ ರಸ್ತೆ ಹಾಗೂ ಬಿ.ಚನ್ನಸಂದ್ರ ರಸ್ತೆಯ 1.3 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 18 ತಳ್ಳುವ ಗಾಡಿಗಳನ್ನು, 6 ಪೆಟ್ಟಿ ಅಂಗಡಿಗಳು, 9 ಶೀಟ್ಸ್ / ಮೇಲ್ಚಾವಣಿ, 5 ಮೆಟ್ಟಿಲುಗಳು, 16 ಜಾಹೀರಾತು/ ನಾಮ ಫಲಕಗಳು ಹಾಗೂ 18 ಟನ್ ಕಟ್ಟಡದ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿರುತ್ತದೆ
ಶಾಂತಿನಗರ ವಿಭಾಗ
ಯೋಗಾನಂದ ಪರಮಹಂಸ ರಸ್ತೆಯ 0.5 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 2 ಪೆಟ್ಟಿ ಅಂಗಡಿಗಳನ್ನು ಹಾಗೂ 3 ಟನ್ ಕಟ್ಟಡದ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿರುತ್ತದೆ
ಗಾಂಧಿನಗರ ವಿಭಾಗ
ಗುಬ್ಬಿತೋಟದಪ್ಪ ರಸ್ತೆಯ 1.50 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 10 ತಳ್ಳುವ ಗಾಡಿಗಳನ್ನು, 5 ಪೆಟ್ಟಿ ಅಂಗಡಿಗಳು, 3 ಜಾಹೀರಾತು/ನಾಮ ಫಲಕಗಳು ಹಾಗೂ 5 ಟನ್ ಗಳ ಕಟ್ಟಡದ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ.
ಶಿವಾಜಿನಗರ ವಿಭಾಗ
ಕಾಕ್ ಬರ್ನ್ ರಸ್ತೆ ಬಂಬೂ ಬಸಾರ್ – ಹಫೀಸ ಶಾಲೆ ಪ್ರದೇಶದಲ್ಲಿನ 0.50 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 12 ಮೆಟ್ಟಿಲುಗಳು ಹಾಗೂ 2 ಟನ್ ಗಳ ಕಟ್ಟಡದ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿರುತ್ತದೆ.
ಚಾಮರಾಜಪೇಟೆ ವಿಭಾಗ
ಚಾಮರಾಜಪೇಟೆಯ 1ನೇ 3ನೇ ಕ್ರಾಸ್ ರಸ್ತೆಯ 2.00 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 6 ತಳ್ಳುವ ಗಾಡಿಗಳನ್ನು, 5 ಪೆಟ್ಟಿ ಅಂಗಡಿಗಳು, , 9 ಶೀಟ್ಸ್ / ಮೇಲ್ಚಾವಣಿ, 15 ಮೆಟ್ಟಿಲುಗಳು ಹಾಗೂ 4 ಟನ್ ಕಟ್ಟಡದ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ.
ಚಿಕ್ಕಪೇಟೆ ವಿಭಾಗ
ಕನಕನಪಾಳ್ಯ ರಸ್ತೆಯ (ಅಶೋಕ ಪಿಲ್ಲರ್- ಆರ್.ವಿ ಟೀಚರ್ ಕಾಲೇಜ್ ನವರೆಗೆ) 0.8 ಕಿ.ಮೀ ಹಾಗೂ ಟಿ.ಮರಿಯಪ್ಪ ರಸ್ತೆಯ (ಅಶೋಕ ಪಿಲ್ಲರ್ ನಿಂದ ಮುರುಮಾರ ವೃತ್ತದವರೆಗೆ) 1.0 ಕಿ.ಮೀ ರಸ್ತೆಯಲ್ಲಿ ಪಾದಚಾರಿ ಮಾರ್ಗ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆ ವೇಳೆ ಯಾವುದೇ ರೀತಿಯ ಅನಧಿಕೃತ ಒತ್ತುವರಿ ಕಂಡುಬಂದಿರುವುದಿಲ್ಲ.
